Ad imageAd image

ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಅಧಿಕಾರಿಗಳಿಗೆ ಶಾಸಕ ಎಂ.ಟಿ.ಕೃಷಪ್ಪ ಸೂಚನೆ

Bharath Vaibhav
ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಅಧಿಕಾರಿಗಳಿಗೆ ಶಾಸಕ ಎಂ.ಟಿ.ಕೃಷಪ್ಪ ಸೂಚನೆ
WhatsApp Group Join Now
Telegram Group Join Now

ತುರುವೇಕೆರೆ : ಮುಂದಿನ ಮೂರು ತಿಂಗಳಲ್ಲಿ ಬೇಸಿಗೆ ಮತ್ತಷ್ಟು ಹೆಚ್ಚಾಗಲಿದ್ದು, ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸೂಚಿಸಿದರು.

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರವರಿ ತಿಂಗಳಿನಲ್ಲೇ ಬಿಸಿಲು ಅತಿಯಾಗಿದೆ. ಇನ್ನು ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾಗಲಿದೆ. 4 ಸೆಲ್ಸಿಯಸ್ ಅಷ್ಟು ಬಿಸಿಲು ಹೆಚ್ಚಾಗಲಿದೆ ಎಂಬ ವರದಿಗಳು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲಿನ ಝಳ ಹೆಚ್ಚಾಗಿದೆ. ಆದ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಇಂದಿನಿAದಲೇ ಎಚ್ಚರವಹಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ಹೇಮಾವತಿ ನೀರಿನಿಂದ ತುಂಬಿರುವುದರಿಂದ ಅಷ್ಟೊಂದು ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಆದರೂ ಸಹ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವ ಸೃಷ್ಟಿಯಾಗದಂತೆ ಗ್ರಾಮ ಪಂಚಾಯ್ತಿ ಪಿಡಿಒ, ಕಾರ್ಯದರ್ಶಿಗಳು ನೋಡಿಕೊಳ್ಳಬೇಕು. ಯಾವ ಪಂಚಾಯ್ತಿ ವ್ಯಾಪ್ತಿಯ ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂಬ ಮಾಹಿತಿ ಪಟ್ಟಿ ಶೀಘ್ರ ನೀಡಿದರೆ ಅದಕ್ಕೆ ತಕ್ಕ ವ್ಯವಸ್ಥೆ ಮಾಡಲಾಗುವುದು. ಹಳೆಯ ಬೋರ್ವೆಲ್ ರಿಪೇರಿ, ಹೊಸ ಬೋರ್ ವೆಲ್ ಕೊರೆಸುವ ಮುಂತಾದ ಕ್ರಮಗಳ ಬಗ್ಗೆ ಈಗಿನಿಂದಲೇ ವ್ಯವಸ್ಥೆ ಮಾಡಿಕೊಳ್ಳಬೇಕೆಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲ, ಅನುದಾನ ಒದಗಿಸುತ್ತಿಲ್ಲ. ತುರುವೇಕೆರೆ ಪಟ್ಟಣದಲ್ಲಿ 10 ಕೋಟಿ ವೆಚ್ಚದಲ್ಲಿ ಅಮೃತ್ 2.0 ಕುಡಿಯುವ ನೀರಿನ ಕಾಮಗಾರಿ ಹಾಗೂ 10 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಗಳನ್ನು ಅಗೆಯಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ನಂತರ ಪಟ್ಟಣದ ಎಲ್ಲಾ ರಸ್ತೆಗಳನ್ನು ಸರಿಪಡಿಸಿ ಅಭಿವೃದ್ದಿಪಡಿಸಲಾಗುವುದು. ಈ ಕುರಿತಂತೆ ಈಗಾಗಲೇ ಪಟ್ಟಣದ ಅಭಿವೃದ್ದಿಗೆ 45 ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಕೃಷಿ ಇಲಾಖೆಯಿಂದ 52 ಸಾವಿರ ಮಂದಿ ರೈತರಿಗೆ ಫ್ರೂಟ್ ಐಡಿ ಮಾಡಿಕೊಡಲಾಗಿದ್ದು, ಈ ಪೈಕಿ 16 ಸಾವಿರ ರೈತರ ಫ್ರೂಟ್ ಐಡಿಗೆ ಇಕವೈಸಿ ಮಾಡಬೇಕಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಗಳು, ಪಿಡಿಒ ಹಾಗೂ ಸಿಬ್ಬಂದಿ ರೈತರಿಗೆ ಅಗತ್ಯ ಮಾಹಿತಿ ನೀಡಿ ಸಹಕಾರ ದೊರಕಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪೂಜಾ ಶಾಸಕರ ಗಮನಕ್ಕೆ ತಂದರು. ಈ ಕುರಿತಂತೆ ಶಾಸಕರು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಒಗಳು ಪ್ರೂಟ್ ಐಡಿ ಇಕೆವೈಸಿ ಆಗಲು ಸಹಕಾರ ನೀಡಬೇಕು, ರೈತರಿಗೆ ಮಾಹಿತಿ ಒದಗಿಸಬೇಕೆಂದು ಆದೇಶಿಸಿದರು.

ತಹಸೀಲ್ದಾರ್ ಕುಂಇ ಅಹಮದ್, ಇಒ ಅನಂತರಾಜು ಮಾತನಾಡಿ, ಗ್ರಾಮ ಪಂಚಾಯ್ತಿಗೆ ನೂತನವಾಗಿ ಆಡಳಿತಾಧಿಕಾರಿಗಳಾಗಿ ನೇಮಕವಾಗಿರುವ ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೇ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ, ಸಿಬ್ಬಂದಿ, ವಾಟರ್ ಮೆನ್ ಗಳ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ, ಕಡ್ಡಾಯವಾಗಿ ಕಂದಾಯ ವಸೂಲಾತಿ, ನೀರಿನ ತೆರಿಗೆ ವಸೂಲು ಮಾಡಲು ಕ್ರಮವಹಿಸಲು ಎಚ್ಚರಿಕೆ ನೀಡಬೇಕು. ವಾಟರ್ ಮೆನ್ ಗಳು ಜನರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ಅವರ ಮೇಲೆ ಕೂಡಲೇ ಕ್ರಮ ಕೈಗೊಳ್ಳುವುದು. ಪಿಡಿಒಗಳು ತಮ್ಮ ಮೊಬೈಲ್ ಆಫ್ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸಬೇಕು. ಬೇಸಿಗೆ ಹೆಚ್ಚಿರುವುದರಿಂದ ಬೆಂಕಿ ಅನಾಹುತ, ಬೆಳೆ ಹಾನಿ, ಪ್ರಾಣಹಾನಿ ಸಹ ಹೆಚ್ಚು ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆಗೆ (08139-287325) ಕರೆ ಮಾಡುವಂತೆ ನಾಗರೀಕರಲ್ಲಿ ಜಾಗೃತಿ ಮೂಡಿಸಬೇಕೆಂದರು.

ಈ ಸಂದರ್ಭದಲ್ಲಿ ಬಿಇಒ ಸೋಮಶೇಖರ್, ಪಪಂ ಕಂದಾಯ ನಿರೀಕ್ಷಕ ಪ್ರಶಾಂತ್ ಭದ್ರಣ್ಣನವರ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್, ಪಶು ಇಲಾಖೆಯ ಡಾ.ರೇವಣಸಿದ್ದಯ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!