ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬೇಸಿಗೆಯ ತಾಪ ಅತಿ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಫೆಬ್ರವರಿ ತಿಂಗಳಿನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಈಗಾಗಲೇ ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳ ಕಂಡುಬಂದಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಝಳ ತೀವ್ರವಾಗಿದೆ.ಕಲಬುರಗಿ, ಹಾವೇರಿ, ಬಾಗಲಕೋಟೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆ ವರದಿಯಾಗಿದೆ.
ಮುಂಬರುವ ದಿನಗಳ ಎಚ್ಚರಿಕೆ: ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ಬಿಸಿಲು ಇನ್ನಷ್ಟು ತೀವ್ರಗೊಳ್ಳಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ 42 ರಿಂದ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.ಬೆಂಗಳೂರಿನ ಸ್ಥಿತಿ: ಐಟಿ ಸಿಟಿ ಬೆಂಗಳೂರಿನಲ್ಲಿಯೂ ಸಹ ಈ ಬಾರಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಗಡಿ ತಲುಪುವ ಮುನ್ಸೂಚನೆ ನೀಡಲಾಗಿದೆ.
ಜಾಗತಿಕ ತಾಪಮಾನ ಏರಿಕೆ, ವಾತಾವರಣದಲ್ಲಿನ ತೇವಾಂಶದ ಕೊರತೆ ಮತ್ತು ಎಲ್-ನಿನೋ ಪ್ರಭಾವದಿಂದಾಗಿ ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ತಾಪಮಾನ ಹೆಚ್ಚುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೇಸಿಗೆಯ ಆರಂಭದಲ್ಲೇ ಬಿಸಿಲು ಹೆಚ್ಚಾಗುತ್ತಿರುವುದರಿಂದ ಜನರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಮತ್ತು ಅತಿಯಾಗಿ ನೀರು ಕುಡಿಯುವ ಮೂಲಕ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಲಾಗಿದೆ.




