ಫೆಬ್ರವರಿ: ಪ್ರತಿಷ್ಠಿತ ನಾರಾಯಣ ಹೆಲ್ತ್ ಸಿಟಿಯು ಕಳೆದ ಮೂರು ವರ್ಷಗಳಲ್ಲಿ 10,000 ಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ. ಈ ಮೂಲಕ ಸುಧಾರಿತ ಕೀಲು, ಬೆನ್ನುಮೂಳೆ ಮತ್ತು ಸಂಕೀರ್ಣ ಪುನರ್ನಿರ್ಮಾಣ ಚಿಕಿತ್ಸೆಯಲ್ಲಿ ಆಸ್ಪತ್ರೆಯು ಮಹತ್ವದ ಮೈಲಿಗಲ್ಲು ಸಾಧನೆ ಮಾಡಿದೆ. ಈ ಸಾಧನೆಯು ವೈವಿಧ್ಯಮಯ ಮತ್ತು ಸಂಕೀರ್ಣವಾದ ಸ್ನಾಯುಸಂಬಂಧಿ ಸಮಸ್ಯೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಆರ್ಥೊಪೆಡಿಕ್ ಚಿಕಿತ್ಸೆ ಒದಗಿಸುವುದರಲ್ಲಿ ಆಸ್ಪತ್ರೆಯ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ.
ರೋಬೋಟಿಕ್ ನೆರವಿನ ನ್ಯಾವಿಗೇಷನ್, ಸುಧಾರಿತ ಇಮೇಜಿಂಗ್, ನ್ಯೂರೋ ಮಾನಿಟರಿಂಗ್ ಮತ್ತು ಕಸ್ಟಮೈಸ್ ಮಾಡಿದ ಇಂಪ್ಲಾಂಟ್ ತಂತ್ರಜ್ಞಾನದ ಬೆಂಬಲದೊಂದಿಗೆ, ಆರ್ಥೊಪೆಡಿಕ್ಸ್ ವಿಭಾಗವು ಹೆಚ್ಚಿನ ಶಸ್ತ್ರಚಿಕಿತ್ಸಾ ನಿಖರತೆ ಮತ್ತು ಅತ್ಯುತ್ಕೃಷ್ಟ ಫಲಿತಾಂಶ ಒದಗಿಸುವ ಮೂಲಕ ಸವಾಲಿನ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದನ್ನು ಮುಂದುವರಿಸಿದೆ. ಇದು ತಂತ್ರಜ್ಞಾನ-ಚಾಲಿತ ಮತ್ತು ರೋಗಿ-ಕೇಂದ್ರಿತ ಆರೈಕೆಯ ಕಡೆಗೆ ಆಸ್ಪತ್ರೆಯು ನಿರಂತರವಾಗಿ ಗಮನ ಹರಿಸಿರುವುದನ್ನು ಪ್ರತಿಬಿಂಬಿಸುತ್ತದೆ. ಈ ಉನ್ನತ ಮಟ್ಟದ ಪರಿಣತಿಯು ಆಸ್ಪತ್ರೆಯಲ್ಲಿ ನಿರ್ವಹಿಸಲಾದ ಇತ್ತೀಚಿನ ಹಲವಾರು ಉನ್ನತ-ಸಂಕೀರ್ಣತೆಯ ಪ್ರಕರಣಗಳಲ್ಲಿ ಕಾಣಬಹುದಾಗಿದೆ.
ಅಂತಹ ಒಂದು ಪ್ರಕರಣದಲ್ಲಿ, ಕಲಬುರಗಿಯ 70 ವರ್ಷದ ವ್ಯಕ್ತಿ ಜನಕ್ (ಹೆಸರು ಬದಲಾಯಿಸಲಾಗಿದೆ), ನಿರಂತರ ಸೊಂಟದ ನೋವಿನಿಂದಾಗಿ ಸುಮಾರು ಒಂದು ವರ್ಷದಿಂದ ನಡೆಯಲು ಸಾಧ್ಯವಾಗದೆ ಸಹಾಯಕ್ಕಾಗಿ ನಾರಾಯಣ ಹೆಲ್ತ್ ಸಿಟಿಯನ್ನು ಸಂಪರ್ಕಿಸಿದ್ದರು. ಅವರು 1999ರಲ್ಲಿ ಸಂಪೂರ್ಣ ಹಿಪ್ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ನಂತರ 2013 ರಲ್ಲಿ ಮರು-ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಇಂಪ್ಲಾಂಟ್ ಸಡಿಲಗೊಂಡಿರುವುದನ್ನು ಮತ್ತು ಕೀಲಿನ ಸುತ್ತ ದೊಡ್ಡ ಊತ ಬೆಳೆದಿರುವುದನ್ನು ವೈದ್ಯರು ಪತ್ತೆಹಚ್ಚಿದರು. ತಪಾಸಣೆಗಳು ಮೆಟಲೋಸಿಸ್ (ಇಂಪ್ಲಾಂಟ್ನ ಲೋಹದ ಘಟಕಗಳಿಗೆ ಉಂಟಾಗುವ ಪ್ರತಿಕ್ರಿಯೆ) ಎಂಬ ಅಪರೂಪದ ಸಮಸ್ಯೆಯನ್ನು ದೃಢಪಡಿಸಿದವು, ಇದು ಗಮನಾರ್ಹ ಮೂಳೆ ಹಾನಿ ಉಂಟಾಗಲು ಕಾರಣವಾಗಿತ್ತು. ತಂಡವು ಹಂತ-ಹಂತವಾಗಿ ಪುನರ್ನಿರ್ಮಾಣವನ್ನು ಮಾಡಿತು, ಮೊದಲು ವಿಫಲವಾದ ಇಂಪ್ಲಾಂಟ್ ಮತ್ತು ಹಾನಿಗೊಳಗಾದ ಅಂಗಾಂಶವನ್ನು ತೆಗೆದುಹಾಕಲಾಯಿತು ಮತ್ತು ನಂತರ ಕಸ್ಟಮೈಸ್ ಮಾಡಿದ 3ಡಿ-ಪ್ರಿಂಟೆಡ್ ಘಟಕ ಮತ್ತು ವಿಶೇಷ ಪ್ರಾಸ್ಥೆಸಿಸ್ ಬಳಸಿ ಸೊಂಟದ ಕೀಲನ್ನು ಪುನರ್ನಿರ್ಮಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಶೀಘ್ರದಲ್ಲೇ ಬೆಂಬಲದೊಂದಿಗೆ ನಿಲ್ಲಲು ಮತ್ತು ನಡೆಯಲು ಸಾಧ್ಯವಾಯಿತು.
ನಾರಾಯಣ ಹೆಲ್ತ್ ಸಿಟಿಯ ಆರ್ಥೊಪೆಡಿಕ್ಸ್ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಸುಮನ್ ಎಂ. ಬೈರೇಗೌಡ ಮಾತನಾಡಿ, “ಈ ಪ್ರಕರಣವು ಇಂಪ್ಲಾಂಟ್ ಸಡಿಲಗೊಳ್ಳುವಿಕೆ, ಮೆಟಲೋಸಿಸ್ ಮತ್ತು ಪ್ರಮುಖ ಮೂಳೆ ನಷ್ಟವನ್ನು ಒಳಗೊಂಡ ಅಪರೂಪದ ಮತ್ತು ಸವಾಲಿನ ಮರು-ಶಸ್ತ್ರಚಿಕಿತ್ಸೆಯ ಪ್ರಕರಣವಾಗಿತ್ತು. ನಾವು ಹಂತ-ಹಂತದ ವಿಧಾನವನ್ನು ಅಳವಡಿಸಿಕೊಂಡಿದ್ದು, ಮೊದಲು ಪೀಡಿತ ಅಂಗಾಂಶವನ್ನು ಸ್ವಚ್ಛಗೊಳಿಸಿ ನಂತರ ಕಸ್ಟಮೈಸ್ ಮಾಡಿದ 3ಡಿ-ಪ್ರಿಂಟೆಡ್ ಇಂಪ್ಲಾಂಟ್ ನೊಂದಿಗೆ ಕೀಲನ್ನು ಪುನರ್ನಿರ್ಮಿಸಿದೆವು. ಸಂಕೀರ್ಣತೆಯ ಹೊರತಾಗಿಯೂ, ರೋಗಿಯು ಶಸ್ತ್ರಚಿಕಿತ್ಸೆಯ ನಂತರ ಶೀಘ್ರದಲ್ಲೇ ಚಲನೆ ಮಾಡುವುದು ಸಾಧ್ಯವಾಯಿತು. ರೋಗಿಯನ್ನು ಮತ್ತೆ ಮೊದಲಿನಂತೆ ಮಾಡುವುದು ಯಾವಾಗಲೂ ನಮ್ಮ ಪ್ರಾಥಮಿಕ ಗುರಿಯಾಗಿರುತ್ತದೆ” ಎಂದು ಹೇಳಿದರು.

ಇನ್ನೊಂದು ಸಂಕೀರ್ಣ ಪ್ರಕರಣದಲ್ಲಿ, 13 ವರ್ಷದ ಅನನ್ಯಾ (ಹೆಸರು ಬದಲಾಯಿಸಲಾಗಿದೆ) ತೀವ್ರವಾದ ಹುಟ್ಟಿನಿಂದಲೇ ಬರುವ ಸ್ಕೋಲಿಯೊಸಿಸ್ ಸಮಸ್ಯೆಯೊಂದಿಗೆ ನಾರಾಯಣ ಹೆಲ್ತ್ ಸಿಟಿಗೆ ಬಂದಿದ್ದರು. ಈ ಸಮಸ್ಯೆಯು ಅವರ ಬೆನ್ನುಮೂಳೆಯನ್ನು 80 ಡಿಗ್ರಿಗಿಂತ ಹೆಚ್ಚು ಬಾಗುವಂತೆ ಮಾಡಿತ್ತು ಮತ್ತು ಭುಜದ ಅಸಮತೋಲನ ಮತ್ತು ನಡೆಯಲು ಹೆಚ್ಚು ತೊಂದರೆಗೆ ಕಾರಣವಾಗಿತ್ತು. ನಿಖರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಿಯಲ್-ಟೈಮ್ ಮಾನಿಟರಿಂಗ್ ಜೊತೆಗೆ ರೋಬೋಟಿಕ್ ನೆರವಿನ ನ್ಯಾವಿಗೇಷನ್ ಬಳಸಿ ಅವರಿಗೆ ಸಂಕೀರ್ಣ ಬೆನ್ನುಮೂಳೆಯ ತಿದ್ದುಪಡಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ನರಗಳ ಕಾರ್ಯವನ್ನು ರಕ್ಷಿಸುತ್ತಲೇ ಇಂಪ್ಲಾಂಟ್ ಗಳನ್ನು ನಿಖರವಾಗಿ ಇರಿಸಲು ಈ ತಂತ್ರಜ್ಞಾನವು ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡಿತು. ಶಸ್ತ್ರಚಿಕಿತ್ಸೆಯ ನಂತರ, ಅವರ ಬೆನ್ನುಮೂಳೆಯ ಜೋಡಣೆಯನ್ನು ಗಮನಾರ್ಹವಾಗಿ ಸರಿಪಡಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರದ ಎರಡನೇ ದಿನದಂದು ಅವರನ್ನು ನಡೆಯುವಂತೆ ಮಾಡಲಾಯಿತು ಮತ್ತು ಸುಧಾರಿತ ಸಮತೋಲನ ಹಾಗೂ ನಡೆಯುವ ಸಾಮರ್ಥ್ಯದ ಜೊತೆಗೆ ಡಿಸ್ ಚಾರ್ಜ್ ಮಾಡಲಾಯಿತು.
ನಾರಾಯಣ ಹೆಲ್ತ್ ಸಿಟಿಯ ಆರ್ಥೊಪೆಡಿಕ್ಸ್ ವಿಭಾಗದ ಬೆನ್ನುಮೂಳೆಯ ಕನ್ಸಲ್ಟೆಂಟ್ ಡಾ. ವಿನು ರಾಜ್ ಅವರು ಮಾತನಾಡಿ, “ಸಂಕೀರ್ಣ ಬೆನ್ನುಮೂಳೆಯ ಸಮಸ್ಯೆಗಳಲ್ಲಿ ನಿಖರತೆ ಬಹಳ ಮುಖ್ಯ. ರೋಬೋಟಿಕ್ ನೆರವಿನ ನ್ಯಾವಿಗೇಷನ್ ನಮಗೆ ಇಂಪ್ಲಾಂಟ್ ನಿಯೋಜನೆಯನ್ನು ಮುಂಚಿತವಾಗಿ ಯೋಜಿಸಲು ಮತ್ತು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೆಚ್ಚಿನ ನಿಖರತೆಯೊಂದಿಗೆ ಶಸ್ತ್ರಚಿಕಿತ್ಸೆ ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ, ಹಾಗೆಯೇ ರಿಯಲ್-ಟೈಮ್ ಮಾನಿಟರಿಂಗ್ ವ್ಯವಸ್ಥೆಯು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ತಂತ್ರಜ್ಞಾನವು ನಮಗೆ ಬೆಂಬಲ ನೀಡುತ್ತದೆಯಾದರೂ, ಯಾವಾಗಲೂ ಶಸ್ತ್ರಚಿಕಿತ್ಸಾ ನಿರ್ಧಾರವೇ ಪ್ರಮುಖವಾಗಿರುತ್ತದೆ. ನಮ್ಮ ಅಂತಿಮ ಗುರಿಯು ಕೇವಲ ಬೆನ್ನುಮೂಳೆಯನ್ನು ಸರಿಪಡಿಸುವುದು ಮಾತ್ರವೇ ಆಗಿರಲಿಲ್ಲ, ಯುವ ರೋಗಿಯು ತಮ್ಮ ದೈನಂದಿನ ಜೀವನದಲ್ಲಿ ಸಮತೋಲನ ಹೊಂದುವುದು, ಮತ್ತೆ ಮೊದಲಿನಂತೆ ನಡೆಯುವುದು ಮತ್ತು ಆತ್ಮವಿಶ್ವಾಸವನ್ನು ಮರಳಿ ಪಡೆಯುವುದಕ್ಕೆ ಸಹಾಯ ಮಾಡುವುದೂ ಆಗಿತ್ತು” ಎಂದು ಹೇಳಿದರು.
ಬೆನ್ನುಮೂಳೆ ಮತ್ತು ಕೀಲು ಪುನರ್ನಿರ್ಮಾಣದ ಜೊತೆಗೆ, ಆಸ್ಪತ್ರೆಯು ಸಂಕೀರ್ಣ ಆರ್ಥೊಪೆಡಿಕ್ ಆಂಕಾಲಜಿ (ಕ್ಯಾನ್ಸರ್) ಪ್ರಕರಣಗಳನ್ನು ಸಹ ನಿರ್ವಹಿಸಿದೆ. 19 ವರ್ಷದ ಸೋಮಲಿಂಗ್ (ಹೆಸರು ಬದಲಾಯಿಸಲಾಗಿದೆ) ನಿರಂತರ ಭುಜದ ನೋವಿನೊಂದಿಗೆ ಬಂದಿದ್ದರು, ಈ ಸಮಸ್ಯೆಯನ್ನು ‘ಈವಿಂಗ್ಸ್ ಸಾರ್ಕೋಮಾ’ ಎಂದು ರೋಗನಿರ್ಣಯ ಮಾಡಲಾಯಿತು. ಇದು ಅಪರೂಪದ ಮತ್ತು ಆಕ್ರಮಣಕಾರಿ ಮೂಳೆ ಕ್ಯಾನ್ಸರ್ ಆಗಿದೆ. ಗೆಡ್ಡೆಯು ಭುಜದ ಮೂಳೆಯನ್ನು ಗಮನಾರ್ಹವಾಗಿ ಹಾನಿಗೊಳಿಸಿತ್ತು. ಕೀಮೋಥೆರಪಿಗೆ ದೊರೆತ ಉತ್ತಮ ಪ್ರತಿಕ್ರಿಯೆಯ ನಂತರ, ತಂಡವು ಸಂಕೀರ್ಣವಾದ ಲಿಂಬ್-ಸಾಲ್ವೇಜ್ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಪೀಡಿತ ಮೂಳೆಯನ್ನು ತೆಗೆದುಹಾಕಿ ಮತ್ತು ಭುಜವನ್ನು ಲೋಹದ ಪ್ರಾಸ್ಥೆಸಿಸ್ ನೊಂದಿಗೆ ಪುನರ್ನಿರ್ಮಿಸಿತು. ಅವರು ತರುವಾಯ ರೇಡಿಯೊಥೆರಪಿ ಮತ್ತು ಕೀಮೋಥೆರಪಿಯನ್ನು ಪೂರ್ಣಗೊಳಿಸಿದರು ಮತ್ತು ಇದೀಗ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಡಾ. ಸುಮನ್ ಈ ಕುರಿತು ಮಾತನಾಡಿ, “ಆಕ್ರಮಣಕಾರಿ ಮೂಳೆ ಕ್ಯಾನ್ಸರ್ ಗಳಲ್ಲಿ ಆರಂಭಿಕ ರೋಗನಿರ್ಣಯ ಮತ್ತು ಸಂಘಟಿತ ಚಿಕಿತ್ಸೆ ನಿರ್ಣಾಯಕವಾಗಿದೆ. ಕೀಮೋಥೆರಪಿಗೆ ದೊರೆತ ಉತ್ತಮ ಪ್ರತಿಕ್ರಿಯೆಯು ಆಂಕಾಲಾಜಿಕಲ್ ಸುರಕ್ಷತೆಯನ್ನು ಕಾಪಾಡಿಕೊಳ್ಳುತ್ತಲೇ ಸಂಕೀರ್ಣ ಪುನರ್ನಿರ್ಮಾಣದ ಮೂಲಕ ಅಂಗವನ್ನು ಸಂರಕ್ಷಿಸಲು ನಮಗೆ ಅವಕಾಶ ಮಾಡಿಕೊಟ್ಟಿತು” ಎಂದು ಹೇಳಿದರು.
ಮೂರು ವರ್ಷಗಳಲ್ಲಿ 10,000 ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿರುವ ನಾರಾಯಣ ಹೆಲ್ತ್ ಸಿಟಿಯು, ಸುಧಾರಿತ ಆರ್ಥೊಪೆಡಿಕ್ ಮತ್ತು ಬೆನ್ನುಮೂಳೆಯ ಚಿಕಿತ್ಸಾ ಕೇಂದ್ರವಾಗಿ ತನ್ನ ಪಾತ್ರವನ್ನು ಬಲಪಡಿಸುವುದನ್ನು ಮುಂದುವರಿಸಿದೆ. ರೋಗಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡಲು ವೈದ್ಯಕೀಯ ಪರಿಣತಿ, ತಂತ್ರಜ್ಞಾನ ಏಕೀಕರಣ ಮತ್ತು ಬಹುಶಿಸ್ತೀಯ ಸಹಯೋಗ ಕ್ರಮಗಳನ್ನು ಕೈಗೊಂಡಿದೆ.
ಪತ್ರಿಕಾಗೋಷ್ಟಿಯಲ್ಲಿ ನಾರಾಯಣ ಹೆಲ್ತ್ ಸಿಟಿಯ ಆರ್ಥೋಪೆಡಿಕ್ಸ್ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಸುಮನ್ ಎಂ ಬೈರೇಗೌಡ, ನಾರಾಯಣ ಹೆಲ್ತ್ ಸಿಟಿಯ ಆರ್ಥೋಪೆಡಿಕ್ಸ್ ವಿಭಾಗದ ಬೆನ್ನು ಮೂಳೆಯ ಕನ್ಸಲ್ಟೆಂಟ್ ಡಾ. ವಿನು ರಾಜ್, ನಾರಾಯಣ ಹೆಲ್ತ್ ಸಿಟಿಯ ಆರ್ಥೋಪೆಡಿಕ್ ಸೆಂಟರ್ ನ ವಿಭಾಗದ ಮುಖ್ಯಸ್ಥರು ಡಾ. ಉತ್ಕರ್ಷ್ ಅಗರ್ವಾಲ್, ಮಾರ್ಕೆಟಿಂಗ್ ಮ್ಯಾನೇಜರ್ಗಳಾದ ವಿಶಾಲ್ ಸಿರ್ಸಿ, ಹನುಮಂತೇಗೌಡ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಗೋಪಾಲ್ ಎ ಆರ್ ಉಪಸ್ಥಿತರಿದ್ದರು.
ಸುಧೀರ್ ಕುಲಕರ್ಣಿ ಬಿ ವಿ ನ್ಯೂ ಜ ಹುಬ್ಬಳ್ಳಿ




