Ad imageAd image

ಕೃಷಿ ಕಾಯಕಯೋಗಿ ಒಕ್ಕಲಿಗ ಮುದ್ದಣ್ಣ ಶಿವಶರಣರು

Bharath Vaibhav
ಕೃಷಿ ಕಾಯಕಯೋಗಿ ಒಕ್ಕಲಿಗ ಮುದ್ದಣ್ಣ ಶಿವಶರಣರು
WhatsApp Group Join Now
Telegram Group Join Now
ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು ಚಿಂತಕರು

ಶಿವಶರಣ ಒಕ್ಕಲಿಗ ಮುದ್ದಣ್ಣ 12ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬ ಪ್ರಮುಖ ಶರಣರು. ವಿಜಯಪುರ ಜಿಲ್ಲೆಯ ಜೋಳದಹಾಳ ಗ್ರಾಮದಲ್ಲಿ ಜನಿಸಿದರು ಎಂಬ ಮಾಹಿತಿ ಲಭ್ಯವಿದೆ.
ಇವರು, ಒಕ್ಕಲುತನವನ್ನು (ಕೃಷಿ) ಕಾಯಕವಾಗಿ ಸ್ವೀಕರಿಸಿ, ಜಂಗಮ ದಾಸೋಹ ನಡೆಸುವುದು ತಮ್ಮ ನಿತ್ಯ ಕಾಯಕ ವಾಗಿಸಿಕೊಂಡಿದ್ದರು. ಒಕ್ಕಲುತನವನ್ನು ಕೇವಲ ಕಸುಬಾಗಿ ನೋಡದೆ, ಅದನ್ನೇ ಒಂದು ಪವಿತ್ರ ಕಾಯಕವಾಗಿ (ಜಂಗಮ ದಾಸೋಹ) ಸ್ವೀಕರಿಸಿದ್ದವರು.
ಕೃಷಿ ಕಾಯಕವೇ ಜಗತ್ತಿನ ಅತ್ಯಂತ ಶ್ರೇಷ್ಠ ಕಾಯಕವೆಂದು ಪ್ರತಿಪಾದಿಸಿದವರು. ಬೆಳೆದು ಬಂದ ದವಸ ಧಾನ್ಯಗಳನ್ನು ದಾಸೋಹಕ್ಕೆ ಅರ್ಪಿಸುತ್ತಿದ್ದರು.ಕೃಷಿ ಮತ್ತು ಆಧ್ಯಾತ್ಮಿಕತೆಯನ್ನು ಒಂದಾಗಿಸಿದ ಅಚ್ಚಗನ್ನಡದ ಕಾಯಕ ಜೀವಿ ಮತ್ತು ಶರಣರ ಸಮೂಹದಲ್ಲಿ ವಿಶಿಷ್ಟ ಸ್ಥಾನ ಹೊಂದಿದವರಾಗಿದ್ದಾರೆ.ಕೃಷಿ ವೃತ್ತಿಯಲ್ಲಿದ್ದುಕೊಂಡೇ ಅಧ್ಯಾತ್ಮಿಕದ ಅನುಭವವನ್ನು ಸಾಧಿಸಿ, ವಚನಗಳು ಬರೆದಿರುವುದು ನೋಡಬಹುದು.

‘ಕಾಮಭೀಮ ಜೀವಧನದೊಡೆಯ’ ಅಂಕಿತದಲ್ಲಿ ಸುಮಾರು 12ಕ್ಕೂ ಹೆಚ್ಚು ಸರಳ-ಪ್ರಾಕೃತಿಕ ಶೈಲಿಯಲ್ಲಿ ವಚನಗಳನ್ನು ರಚಿಸಿದ್ದು ಕಾಣುತ್ತೇವೆ. ಇನ್ನು ವಿಶೇಷವಾಗಿ ಹೇಳಬೇಕೆಂದರೆ ಅಂದಿನ ಕಲ್ಯಾಣದ ರಾಜನು ಕೇಳಿದ ಹೆಚ್ಚಿನ ತೆರಿಗೆಯನ್ನು ನೀಡದೆ, ಆ ಹಣವನ್ನು ಶರಣರ ದಾಸೋಹ ಸೇವೆಗೆ ವಿನಿಯೋಗಿಸಿದ್ದ ಧೀರ ಶರಣರು ಇವರು ಎಂಬುದು ಇಡೀ ಶರಣ ಸಂಕುಲ ಹೆಮ್ಮೆಯಿಂದ ಹೇಳುತ್ತಾರೆ.
ಶರಣ ಮುದ್ದಣ್ಣನವರು ಮಣ್ಣಲ್ಲಿ ಮಣ್ಣಾಗಿ ದುಡಿದು ಬದುಕಿದ ಶ್ರೇಷ್ಠ ಕಾಯಕ ಜೀವಿ, ಶಿವಶರಣರಲ್ಲಿ ವಿಶಿಷ್ಟ ಸ್ಥಾನ ಹೊಂದಿ, ಇಡೀ ಶರಣರ ಬಳಗಕ್ಕೆ ಮಾದರಿಯಾಗಿದ್ದವರು.

ರೈತರ ಮಹತ್ವವನ್ನು 12ನೇ ಶತಮಾನದಲ್ಲಿಯೇ ಮನದಟ್ಟು ಮಾಡಿಸಿದ ಒಕ್ಕಲಿಗ ಮುದ್ದಣ್ಣನವರು ರೈತರು ವ್ಯವಸಾಯಕ್ಕೆ ಬಳಸುತ್ತಿದ್ದ ವಸ್ತುಗಳನ್ನೇ ಬಳಸಿಕೊಂಡು ವಚನ ರಚಿಸುವ ಮೂಲಕ ಗಮನ ಸೆಳೆದವರು.

ಅಂದಹಾಗೆ ಇವರ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.

ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ, ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ, ವ್ಯವಹರಿಸುವುದಕ್ಕೆ ವೈಶ್ಯನಲ್ಲ, ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ, ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ” ಎಂಬ ವಚನವು ಸಾಕಷ್ಟು ವೈಚಾರಿಕ ಅರ್ಥವನ್ನು ನೀಡುತ್ತದೆ.
ವಿಶೇಷವಾಗಿ ಬೇಸಾಯದ ಭಾಷೆಯಲ್ಲಿ ಆಧ್ಯಾತ್ಮಿಕ ಮತ್ತು ಕಾಯಕದ ಮಹತ್ವವನ್ನು ತಮ್ಮ ವಚನಗಳಲ್ಲಿ ಸಾರಿದ್ದಾರೆ. ಸರಳ, ಕೃಷಿ ಜೀವನದ ಅನುಭವದಿಂದ ಕೂಡಿವೆ. ಉಳುವ ಒಕ್ಕಲಿಗನ ತಪ್ಪನ್ನು ಮನ್ನಿಸಿ ಕರುಣಿಸುವಂತೆ ದೇವರಲ್ಲಿ ಬೇಡುವ ಮೂಲಕ ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದ್ದಾರೆ.

ಇನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾರೆ…

ಪೈರಿಗೆ ನೀರು ಬೇಕೆಂಬಲ್ಲಿ
ಉಚಿತವನರಿದು ಬಿಡಬೇಕು
ಕ್ರೀಗೆ ಅರಿವು ಬೇಕೆಂಬಲ್ಲಿ
ಉಭಯನರಿದು ಘಟಿಸಬೇಕು
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ
ಮೀರಿದರುಂಟೆ
ಕ್ರಿಯೆ ಬಿಡಲಿಲ್ಲ ಅರಿವ ಮರೆಯಲಿಲ್ಲ
ಬೆಳೆಯ ಕೊಯಿದ ಮತ್ತೆ ಹೊಲಕ್ಕೆ ಕಾವಲುಂಟೆ
ಫಲವ ಹೊತ್ತ ಪೈರಿನಂತೆ
ಪೈರನೊಳಕೊಂಡ ಫಲದಂತೆ
ಅರಿವು ಆಚರಣೆಯೆಲ್ಲ ನಿಂದು
ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನನೊಡೆಯನೆಂಬುದ ಭಾವಿಸಲಿಲ್ಲ, ಎಂದು ತಿಳಿಸಿದ್ದಾರೆ.

ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ಅರಿವು ಮತ್ತು ಒಳ್ಳೆಯ ಕ್ರಿಯೆಯು ಒಂದರೊಡನೆ ಮತ್ತೊಂದು ಜತೆಗೂಡಿದಾಗ ವ್ಯಕ್ತಿಗೆ ಯಶಸ್ಸು ದೊರಕುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಕಾಣಬಹುದು. ಜೊತೆಗೆ ರೈತರು ಬೇಸಾಯ ಮಾಡುವಾಗ ಸಣ್ಣ ಪಯಿರುಗಳಿಗೆ ನೀರನ್ನು ಉಣಿಸುವ ಕ್ರಿಯೆಯನ್ನು ಒಂದು ರೂಪಕವನ್ನಾಗಿ ಚಿತ್ರಿಸುತ್ತಾ, ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡುವಾಗ ಅದನ್ನು ಹೇಗೆ ಮಾಡಬೇಕು ಎಂಬುದನ್ನು ಮೊದಲು ಚೆನ್ನಾಗಿ ಅರಿತುಕೊಂಡು, ಅನಂತರ ಸನ್ನಿವೇಶಕ್ಕೆ ತಕ್ಕಂತೆ ಕ್ರಿಯೆಯಲ್ಲಿ ತೊಡಗಬೇಕು. ಹೀಗೆ ಅರಿವು ಮತ್ತು ಕ್ರಿಯೆಯು ಒಳ್ಳೆಯ ಉದ್ದೇಶದಿಂದ ಸರಿಯಾದ ರೀತಿಯಲ್ಲಿ ಒಂದಕ್ಕೊಂದು ಪೂರಕವಾಗಿದ್ದಾಗ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂಬುದನ್ನು ಈ ವಚನದಲ್ಲಿ ತಿಳಿಸಿದ್ದಾರೆ. ಅಲ್ಲದೆಅರಿವಿಲ್ಲದೆ ಮಾಡುವ ಕ್ರಿಯೆಯಿಂದ ಇಲ್ಲವೇ ಕ್ರಿಯೆಯಲ್ಲಿ ತೊಡಗದೆ ಕೇವಲ ಅರಿವನ್ನು ಪಡೆದ ಮಾತ್ರದಿಂದಲೇ ಜೀವನದಲ್ಲಿ ಯಶಸ್ಸು ದೊರೆಯುವುದಿಲ್ಲ.ಅದೇ ರೀತಿ ನಾವು ನಮ್ಮ ನಿಜವಾದ ಭವಬಂದನದಿಂದ ಪಾರಾಗಲು ಅಂತರಂಗದ ಒಕ್ಕಲುತನ ಮುಖ್ಯ ಎಂಬುದನ್ನು ವಚನಗಳ ಮೂಲಕ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಒಕ್ಕಲಿಗ ಮುದ್ದಣ್ಣನವರ ವಚನಗಳು ಶ್ರಮಜೀವಿಗಳ ಬದುಕಿಗೆ ಆಧ್ಯಾತ್ಮಿಕ ರೂಪ ನೀಡಿ, ಕೆಲಸದಲ್ಲಿಯೇ ದೇವರನ್ನು ಕಾಣುವ ಹಾದಿಯನ್ನು ತೋರಿಸಿದ್ದಾರೆ. ಸಿರಿ, ಸಂಪದ, ದನ, ಕನಕ ಅಧಿಕಾರ ಅಂತಸ್ತುಗಳೇ ಬದುಕಿನ ಗುರಿಯಲ್ಲ. ಈ ಪ್ರಾಪಂಚಿಕ ವಿಷಯಗಳ ಗಳಿಕೆಯಿಂದ ದೊರೆಯುವ ಸುಖವು ಅತ್ಯಂತ ಕ್ಷಣಿಕವಾದದ್ದು. ಆದರೆ ಪರಮ ಸತ್ಯ ಪರಮಾತ್ಮನ ಸಾಕ್ಷಾತ್ಕಾರ ಶಾಶ್ವತವಾದದ್ದು. ಅಂಗವೇ ಭೂಮಿಯಾಗಿ ಅಂಥ ಆತ್ಮಾನಂದವನ್ನು ಪಡೆಯುವುದಕ್ಕೆ ನಾವೆಲ್ಲರೂ ಬದುಕಿನ ಭೌತಿಕ ದೇಹಾರೋಗ್ಯ ಚಟುವಟಿಕೆಯ ಕೃಷಿಯ ಜತೆಗೆ ಆಧ್ಯಾತ್ಮಿಕ ಕೃಷಿ ಮಾಡಬೇಕು ಎಂದು ಮುದ್ದಣ್ಣ ಹೇಳುತ್ತಾರೆ.

ಅಂತೆಯೇ ಜ್ಞಾನಕ್ಕೆ ತಕ್ಕ ಕ್ರಿಯೆ ಇಲ್ಲದಿದ್ದರೆ ಅವರ ಜೀವನ ವ್ಯರ್ಥವೆಂದು ಒಕ್ಕಲಿಗ ಮುದ್ದಣ್ಣನವರು ತಮ್ಮ ಕಾಯಕ ಮತ್ತು ಜೀವನದ ಮೂಲಕ ನಡೆದು ತೋರಿಸಿ ಕೊಟ್ಟಿದ್ದಾರೆ.ತಾನು ಕೃಷಿ ಕಾಯಕದವನೆಂದೂ, ವೇದ-ಶಾಸ್ತ್ರ ಓದಿದವನಲ್ಲ, ಕ್ಷತ್ರಿಯನಲ್ಲ, ವೈಶ್ಯನಲ್ಲವೆಂದು ಹೇಳುತ್ತಾ, ಕಾಯಕವನ್ನೇ ಧರ್ಮವಾಗಿ ತಿಳಿದು ಸಾಗಿದ ಮೇಧಾವಿ ಶರಣರು ಇವರು.

ಇವರ ವಚನಗಳಲ್ಲಿ ಕೃಷಿ ಪರಿಸರದ ಪ್ರತಿಮೆಗಳು (ನೇಗಿಲು, ಭೂಮಿ, ಬೆಳೆ) ಹೆಚ್ಚಾಗಿ ಕಂಡುಬರುತ್ತವೆ. “ಅಂಗವೇ ಭೂಮಿಯಾಗಿ, ಲಿಂಗವೇ ಬೆಳೆಯಾಗಿ” ಎಂಬುದು ಇವರ ವಚನಗಳ ಮೂಲತತ್ವ.ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಒಕ್ಕಲಿಗ ಮುದ್ದಣ್ಣನವರು ಬದುಕಿನ ಮೌಲ್ಯಗಳನ್ನು ಹಸನಾದ ನೇಗಿಲಿನಿಂದ ಬರೆದು ಬದುಕಿ, ಬೇಸಾಯವೇ ತಪಸ್ಸು ಎಂದು ನಂಬಿದ್ದ ಇವರು, ಶ್ರಮವೇ ಭಕ್ತಿಯೆಂದು ಜಗತ್ತಿಗೆ ಸಾರಿದ ಶ್ರೇಷ್ಠ ಕೃಷಿ ಕಾಯಕಯೋಗಿ ಶರಣಾಗಿದ್ದಾರೆ.

ಗೌರವ ಮಾತು:- 12ನೆ ಶತಮಾನದ 770 ಅಮರ ಗಣಂಗಳಲ್ಲಿ ಕಾಯಕ ನಿಷ್ಠ ಅದ್ವಿತೀಯ ದಾಸೋಹ ಶ್ರೇಷ್ಟರಲ್ಲಿ ಒಕ್ಕಲಿಗರ ಮುದ್ದಣ್ಣನವರು ಅಧ್ವಿತಿಯರು.ತಾನು ನಂಬಿದ ಬದುಕಿನ ಆಧಾರದ ವ್ಯವಸಾಯದ ಜೊತೆಗೆ ಆಧ್ಯಾತ್ಮಿಕ ಕೃಷಿ ಮಾಡುತ್ತ ಬಸವಾದಿ ಶಿವಶರಣರ ಸಂಕುಲದಲ್ಲಿದ್ದು ತಮ್ಮದೇ ಆದ ಇರುವಿಕೆ ಜಗತ್ತಿಗೆ ತೋರಿಸಿ,

ಕಾಯಕ ಮತ್ತು ದಾಸೋಹ ತತ್ವದ ಪ್ರತೀಕವಾಗಿದ್ದಾರೆ. “ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ” ಎಂಬ ಪರಿಕಲ್ಪನೆಯೊಂದಿಗೆ, ಅಂತರಂಗದ ಅರಿವಿನ ಬೇಸಾಯವನ್ನು ತಮ್ಮ ವಚನಗಳ (ಮುದ್ರೆ: ಕಾಮಭೀಮ ಜೀವಧನದೊಡೆಯ) ಮೂಲಕ ಸಾರಿದ ಶ್ರಮಜೀವಿ ಅನುಭಾವಿ ಶರಣರು.ಬಸವಾದಿ ಶರಣರು ಅದರಲ್ಲಿ ವಿಶೇಷವಾಗಿ ಶರಣ ಒಕ್ಕಲಿಗ ಮುದ್ದಣ್ಣನವರು ಒಕ್ಕಲುತನವನ್ನೇ ಶ್ರೇಷ್ಠ ಕಾಯಕವೆಂದು ನಂಬಿದ್ದರು. ಆಗಿನ ಕಾಲದಲ್ಲಿಯೇ ಭೂ ರಕ್ಷಣೆ, ಬೇಸಾಯ ಯಾವ ರೀತಿ ಮಾಡಬೇಕು ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ.ಇವರ ವಚನದಲ್ಲಿ ಬದುಕಿನ ಸಾರ, ರೈತರಿಗೆ ಸಲಹೆ, ರೈತರಿಗೆ ಬದುಕಿನ ಸಾಮರಸ್ಯ ಹೇಳಿದ್ದಾರೆ.ಇಂದಿನ ರೈತ ಸಮುದಾಯಕ್ಕೆ ಅವರ ಕೃಷಿ ಕಾಯಕ ತತ್ವ ಪ್ರೇರಣದಾಯಕವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!