ಬೆಂಗಳೂರು: ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ 2025-26ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರಾಜ್ಯದ ರೈತರಿಗೆ ಪ್ರತಿ ಟನ್‌ಗೆ 50 ರೂಪಾಯಿ ಆರ್ಥಿಕ ನೆರವಿನ ಮೊತ್ತವಾಗಿ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಕಳೆದ ನವೆಂಬರ್ 8ರಂದು ಕರೆದಿದ್ದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ಮೇಲೆ 100 ರೂ. ಆರ್ಥಿಕ ನೆರವು ನೀಡುವ ನಿರ್ಧಾರ ಪ್ರಕಟಿಸಿದ್ದರು.
ಈ 100 ರೂ. ಆರ್ಥಿಕ ನೆರವಿನಲ್ಲಿ ರಾಜ್ಯ ಸರ್ಕಾರ 50 ರೂ. ಹಾಗೂ ಸಕ್ಕರೆ ಕಾರ್ಖಾನೆಗಳು 50 ರೂ. ನೀಡಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಅದರದಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಆರ್ಥಿಕ ನೆರವಿನ 300 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ನಿರ್ಧಾರದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
💰 ಆರ್ಥಿಕ ನೆರವಿನ ವಿವರ
ಪ್ರತಿ ಟನ್‌ಗೆ 50 ರೂ.: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಸರ್ಕಾರವು ಪ್ರತಿ ಟನ್‌ಗೆ 50 ರೂ. ಪ್ರೋತ್ಸಾಹಧನ ನೀಡುತ್ತಿದೆ.ನೇರ ನಗದು ವರ್ಗಾವಣೆ (DBT): ಈ ಹಣವು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ.
ಒಟ್ಟು ಮೊತ್ತ: ಪ್ರಸಕ್ತ ಹಂಗಾಮಿನಲ್ಲಿ ಸುಮಾರು 600 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದ್ದು, ಅದಕ್ಕೆ ಪೂರಕವಾಗಿ 300 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.




