ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಸರ್ಕಾರವೇ ಮುಂದೆ ನಿಂತು ಗ್ರಾಮದಲ್ಲಿ ಹೊಸದಾಗಿ ಕ್ಷೌರದ ಅಂಗಡಿಯನ್ನು ಪ್ರಾರಂಭಿಸಿದೆ.
ಘಟನೆಯ ಹಿನ್ನೆಲೆ:
ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಸ್ಥಳೀಯ ಕ್ಷೌರಿಕರು ಹಿಂದೇಟು ಹಾಕಿದ್ದರು.ಈ ಬಗ್ಗೆ ದೂರುಗಳು ಕೇಳಿಬಂದಾಗ ತಹಶೀಲ್ದಾರ್ ಸಭೆ ನಡೆಸಿ, ನೋಟಿಸ್ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕ್ಷೌರಿಕರು ತಮ್ಮ ಪಟ್ಟನ್ನು ಸಡಿಲಿಸದೆ ಅಂಗಡಿಗಳನ್ನೇ ಬಂದ್ ಮಾಡಿದ್ದರು.
ನಿರಾಕರಣೆಗೆ ಕಾರಣವೇನು?
ಗ್ರಾಮದ ನಂಬಿಕೆಯಂತೆ, ಪ್ರತಿವರ್ಷ ಮಹಾನವಮಿಯ ಸಂದರ್ಭದಲ್ಲಿ ವೀರಭದ್ರೇಶ್ವರ ಸ್ವಾಮಿ ದೇವರು ಹಡಪದ ಸಮಾಜದವರ ಮನೆಗೆ ಭೇಟಿ ನೀಡುತ್ತದೆ. ಆ ಸಮಯದಲ್ಲಿ ಹಡಪದ ಕುಟುಂಬದವರು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಈ ಧಾರ್ಮಿಕ ಕಾರಣವನ್ನು ಮುಂದಿಟ್ಟುಕೊಂಡು, ದಲಿತರಿಗೆ ಕ್ಷೌರ ಮಾಡಿದರೆ ದೋಷವಾಗುತ್ತದೆ ಎಂಬ ಅನಿಷ್ಟ ಪದ್ಧತಿಯನ್ನು ಪಾಲಿಸಿ ಕ್ಷೌರ ನಿರಾಕರಿಸಲಾಗಿತ್ತು ಎಂದು ವರದಿಯಾಗಿದೆ.
ಸರ್ಕಾರದ ಕ್ರಮ:
ಈ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಶಿವಶರಣ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಅಧ್ಯಕ್ಷರಾದ ದೇವಪ್ಪ ಹಡಪದ ಅವರು ಸರ್ಕಾರದ ಜೊತೆ ಕೈಜೋಡಿಸಿ, ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾದರು. ಅವರು ತಮ್ಮ ಸಹೋದರರನ್ನೇ ಈ ಗ್ರಾಮಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡಿದ್ದರಿಂದ, ಗುರುವಾರದಿಂದ ಗ್ರಾಮದಲ್ಲಿ ಅಧಿಕೃತವಾಗಿ ಸರ್ಕಾರದ ವತಿಯಿಂದಲೇ ಕ್ಷೌರದ ಅಂಗಡಿ ಕಾರ್ಯಾ ರಂಭ ಮಾಡಿದೆ.




