ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ಒಡಿಶಾ ಮೂಲದ ದಂಪತಿಗಳ ದಾರುಣ ಅಂತ್ಯವಾಗಿದೆ.
ಪತ್ನಿ ಮಂಜುಳಾಳನ್ನು ಕೊಲೆ ಮಾಡಿದ ಪತಿ ದೀಪಂತ್, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಒಡಿಶಾ ಮೂಲದ ದೀಪಂತ್ ಮತ್ತು ಮಂಜುಳಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಇಬ್ಬರೂ ಬೊಮ್ಮಸಂದ್ರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ಕಳೆದ ಬುಧವಾರ ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಗಲಾಟೆ ನಡೆದಿದೆ.
ಈ ಜಗಳ ವಿಕೋಪಕ್ಕೆ ಹೋಗಿ ದೀಪಂತ್ ತನ್ನ ಪತ್ನಿ ಮಂಜುಳಾ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ಹಲ್ಲೆಯಿಂದಾಗಿ ಮಂಜುಳಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಪತ್ನಿ ಮೃತಪಟ್ಟ ನಂತರ ದೀಪಂತ್ ಅವಳ ಶವದ ಮುಂದೆ ಕುಳಿತು ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾನೆ. ಮೃತ ಮಂಜುಳಾಳ ಹಣೆಗೆ ಸಿಂಧೂರವಿಟ್ಟು, ಒಡಿಶಾ ಭಾಷೆಯಲ್ಲಿ ಡೆತ್ನೋಟ್ ಬರೆದಿಟ್ಟಿದ್ದಾನೆ. ನಂತರ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಬೆಳಕಿಗೆ ಬಂದದ್ದು ಹೇಗೆ?: ಮನೆಯಿಂದ ಯಾವುದೇ ಸದ್ದಿಲ್ಲದ ಕಾರಣ ಅನುಮಾನಗೊಂಡ ಮನೆ ಮಾಲೀಕರು ಕಿಟಕಿಯಿಂದ ಇಣುಕಿ ನೋಡಿದಾಗ ಇಬ್ಬರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕಳೆದ ಶುಕ್ರವಾರವೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಪೊಲೀಸ್ ಕ್ರಮ: ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.




