ಬೀದರ : ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಸಹಪಾಠಿಯ ಕಿರುಕುಳ ತಾಳಲಾರದೆ 16 ವರ್ಷದ ಶಾಲಾ ಬಾಲಕಿಯೊಬ್ಬಳು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ (16) ಎಂದು ಗುರುತಿಸಲಾಗಿದೆ.ಈಕೆ ಶಾಲಾ ಕಟ್ಟಡದ ಮೇಲಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆಯೇ ಭೆಮಳಖೇಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿರುಕುಳವೇ ಸಾವಿಗೆ ಕಾರಣ?
ಮದಿಯಾ ಸಾವಿನ ಕುರಿತು ಆಕೆಯ ಚಿಕ್ಕಪ್ಪ ಎಂ.ಡಿ. ಯೂಸುಫ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಸಹಪಾಠಿಯೊಬ್ಬ ಮದಿಯಾಗೆ ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ. ಆತನ ಕಿರುಕುಳದಿಂದ ಬೇಸತ್ತು ನನ್ನ ಮಗಳು ಈ ನಿರ್ಧಾರ ಕೈಗೊಂಡಿದ್ದಾಳೆ,” ಎಂದು ಅವರು ಆರೋಪಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ:
ಕಿರುಕುಳದ ಆರೋಪಕ್ಕೆ ಪುಷ್ಟಿ ನೀಡುವಂತೆ, ಶಾಲೆಯ ಆವರಣದಲ್ಲಿ ಸಹಪಾಠಿ ವಿದ್ಯಾರ್ಥಿಯು ಬಾಲಕಿಗೆ ಚುಡಾಯಿಸುತ್ತಿದ್ದ ದೃಶ್ಯಗಳು ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.




