ಆನ್‌ಲೈನ್ ಆಹಾರ ಪೂರೈಕೆ ಮಾಡುವ ಪ್ಲಾಟ್‌ಫಾರ್ಮ್ ಝೋಮ್ಯಾಟೋದಲ್ಲಿ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲನ್ನು ಹೋಲುವ ಮಾಂಸದ ಪೀಸೊಂದು ಸಿಕ್ಕಿದೆ ಎಂದು ಗ್ರಾಹಕನೋರ್ವ ವೀಡಿಯೋ ಮಾಡಿ ಹೇಳಿಕೊಂಡಿದ್ದಾನೆ.
ಈ ವಿಚಾರ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿ ತಿನ್ನುವ ಸಾವಿರಾರು ಗ್ರಾಹಕರಿಗೆ ಆಘಾತ ನೀಡಿದ್ದು, ಆತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಒಂದೆಡೆ ಇಸ್ರೇಲ್ ಅಮೆರಿಕಾ ಇರಾನ್ ನಡುವಣ ಯುದ್ಧದ ನಂತರ ಸಿಲಿಂಡರ್ ಅಭಾವದಿಂದಾಗಿ ಹೊಟೇಲ್‌ಗಳು ಕೆಲವು ಕಡೆಗಳಲ್ಲಿ ಆಹಾರ ವಿತರಣೆಯನ್ನೇ ನಿಲ್ಲಿಸಿದ್ದರೆ ಇಲ್ಲೊಂದು ಕಡೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ನಾಯಿ ಕಾಲು ಪತ್ತೆಯಾಗಿದೆ ಎಂದು ಗ್ರಾಹಕನೋರ್ವ ಹೇಳಿಕೊಂಡಿದ್ದು, ಇದು ಅನೇಕ ಬಿರಿಯಾನಿ ಪ್ರಿಯರನ್ನು ಆಘಾತಕ್ಕೀಡು ಮಾಡಿದೆ.
void @wosgnn ಎಂಬ ಎಕ್ಸ್ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮಾಂಸದ ಒಂದು ತುಂಡನ್ನು ಎತ್ತಿ ತೋರಿಸುತ್ತಾ ಇದು ನಾಯಿಯ ಕಾಲನ್ನು ಹೋಲುವಂತಿದೆ.
ಇದು ಕೋಳಿ ಅಥವಾ ಕುರಿಯ ಕಾಲುಗಳಿಗಿಂತ ನಾಯಿಯ ಪಾದವನ್ನು ಹೋಲುವಂತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿದೆ.
ಅನೇಕರು ಈ ವಿಚಾರದ ಬಗ್ಗೆ ಭಯ ವ್ಯಕ್ತಪಡಿಸಿದ್ದರೆ ಇನ್ನೂ ಅನೇಕರು ಡಾಗ್ ಬಿರಿಯಾನಿ ಬೌ ಬೌ ಬಿರಿಯಾನಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮತ್ತೆ ಅನೇಕರು ಗ್ರಾಹಕನ ಈ ಆರೋಪದ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.




