ಅಥಣಿ : ಜನಸೇವೆ ಮೂಲಕ ಸಮಾಜದ ಆರೋಗ್ಯ ಕಾಪಾಡುವ ಉದ್ದೇಶದಿಂದ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ಹಾಗೂ ಓಂ ಮಾಧವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಶುಕ್ರವಾರ ದಿ:೧೩-೦೩-೨೦೨೬ ರಂದು ಯಶಸ್ವಿಯಾಗಿ ನಡೆಯಿತು. ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಬಿ.ಎನ್. ಜಗದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾದ ಈ ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಭಾಗವಹಿಸಿ ಉಚಿತ ತಪಾಸಣೆ ಮತ್ತು ವೈದ್ಯಕೀಯ ಸಲಹೆ ಪಡೆದುಕೊಂಡರು. ಕಾರ್ಯಕ್ರಮದ ನೇತೃತ್ವವನ್ನು ಸುನಿಲ್ ನಾಯಕ್ ಹಾಗೂ ಸಂಗಮೇಶ್ ದಿವಾನಮಳ ವಹಿಸಿದ್ದರು.
ಶಿಬಿರದಲ್ಲಿ ಭಾಗವಹಿಸಿದ ವೈದ್ಯರಾದ ಡಾ. ಗಜಾನನ ಹೊಳಕರ ( ಎಂ.ಬಿ.ಬಿ.ಎಸ್ , ಎಂ.ಡಿ) ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ರೂವಾರಿಯಾದ ಸುನಿಲ್ ನಾಯಕ್ ಮಾತನಾಡಿ, ಜಯ ಕರ್ನಾಟಕ ಸಂಘಟನೆ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯಾಧ್ಯಕ್ಷರಾದ ಡಾ. ಬಿ.ಎನ್. ಜಗದೀಶ್ ಅವರ ಹುಟ್ಟುಹಬ್ಬವನ್ನು ಜನಸೇವೆಯ ಮೂಲಕ ಆಚರಿಸುವ ಉದ್ದೇಶದಿಂದ ಈ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಈಗಾಗಲೇ ನೂರಾರು ಜನರು ತಪಾಸಣೆ ಮಾಡಿಸಿಕೊಂಡು ಸದುಪಯೋಗ ಪಡೆದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಮುಖಂಡರು ಹಾಗೂ ಮುಖ್ಯ ಅತಿಥಿಗಳಾಗಿ ರಿಯಾಜ್ ಬಿರಾದಾರ್, ಹೈದರ್ ಬಾಲ್ದಾರ್, ವಿಜಯ ಪವಾರ, ಮಹಾಂತೇಶ್ ವಸ್ತ್ರದ, ಸಂಗಮೇಶ್ ದಿವಾನಮಳ, ಅನಿಲ್ ಪಾಟೀಲ, ಚೇತನ್ ಸನದಿ, ಗಂಗೂಲಿ ತುರಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಓಂ ಮಾಧವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ನೇತ್ರ ತಪಾಸಣೆ, ಹೃದಯ ಸಂಬಂಧಿತ ಪರೀಕ್ಷೆ, ಮಧುಮೇಹ ಹಾಗೂ ಥೈರಾಯ್ಡ್ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆಗಳು ಉಚಿತವಾಗಿ ನಡೆಸಲಾಯಿತು. ಈ ಶಿಬಿರದಿಂದ ಕೊಕಟನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಿದೆ.
ವರದಿ : ಪ್ರಲ್ಹಾದ ವಾಘಮೋರೆ.




