ಬೆಂಗಳೂರು : ಯುವಕರ ಗುಂಪೊಂದು ವ್ಯಕ್ತಿಯೊಬ್ಬನನ್ನು ಗೋಣಿಚೀಲದಲ್ಲಿ ಕಟ್ಟಿಕೊಂಡು ಬಂದು ಆತನನ್ನು ಪಾರ್ಸೆಲ್ ಮಾಡುವಂತೆ ಕೊರಿಯರ್ ಕಚೇರಿಯಲ್ಲಿ ಹುಚ್ಚಾಟ ಮಾಡಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೈಯಾಲಿಕಾವಲ್ ಬಳಿಯ ವಿನಾಯಕ ವೃತ್ತದಲ್ಲಿರುವ ಕೊರಿಯರ್ ಕಚೇರಿಗೆ ಮಂಗಳವಾರ ಸಂಜೆ 4 ಗಂಟೆಯ ಸುಮಾರಿಗೆ ಆಗಮಿಸಿದ ಐವರ ತಂಡ ಗೋಣಿ ಚೀಲದಲ್ಲಿ ವೃದ್ಧನನ್ನು ಕಟ್ಟಿಕೊಂಡು ತಂದಿದ್ದಾರೆ.
ಇದನ್ನು ಪಾರ್ಸೆಲ್ ಮಾಡಿ ಅಂತ ಹೇಳಿದ್ದಾರೆ. ಚೀಲ ಅಲುಗಾಡುತ್ತಿರುವುದನ್ನು ಕಂಡು ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ವೃದ್ಧನೊಬ್ಬ ಉಸಿರಾಟದ ತೊಂದರೆಯಾಗಿ ಒದ್ದಾಡುತ್ತಿರುವುದನ್ನು ಕಂಡ ಸಿಬ್ಬಂದಿ ಶಾಕ್ ಆಗಿದ್ದಾರೆ.
ಬಳಿಕ ಆತನಿಗೆ ನೀರು ಕುಡಿಸಿದ್ದಾರೆ. ಇಷ್ಟಾದರೂ ಯುವಕರ ತಂಡ ಇವರನ್ನು ಬೇರೆ ರಾಜ್ಯಕ್ಕೆ ಪಾರ್ಸೆಲ್ ಮಾಡಿ ಹಣ ಕೊಡುತ್ತೇವೆ ಎಂದು ಹೇಳಿದ್ದಾರೆ. ಚೀಲದಲ್ಲಿ ವ್ಯಕ್ತಿ ಇರುವುದರಿಂದ ಕೋರಿಯರ್ ಮಾಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ನಿರಾಕರಿಸಿದ್ದು, ಈ ವೇಳೆ ವಾಗ್ವಾದವಾಗಿದೆ. ಇದರಿಂದ ತಲೆಕೆಡಿಸಿಕೊಂಡ ಸಿಬ್ಬಂದಿ ಕೂಡಲೇ ವೈಯಾಲಿಕಾವಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಯುವಕರ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯ ಆಧರಿಸಿ ಯುವಕರ ತಂಡವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಕಥೆ ಬೆಳಕಿಗೆ ಬಂದಿದೆ.
ಇದು ಪ್ರ್ಯಾಂಕ್ ವಿಡಿಯೋ ಕ್ಷಮಿಸಿ
ಯುವಕರ ಹುಚ್ಚಾಟದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ವೈಯಾಲಿಕಾವಲ್ ಠಾಣೆ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಯುವಕರ ತಂಡವನ್ನು ಪತ್ತೆ ಹಚ್ಚಿದಾಗ ಫ್ರ್ಯಾಂಕ್ ವಿಡಿಯೋ ಕಥೆ ಬಯಲಾಗಿದೆ.
ಜತೆಗೆ ಇವರೆಲ್ಲರೂ ಒಂದೇ ಕುಟುಂಬದವರು ಎಂಬುದು ಗೊತ್ತಾಗಿದೆ. ಪ್ರ್ಯಾಂಕ್ ವಿಡಿಯೋ ಮಾಡಲು ವಯಸ್ಸಾದ ತಂದೆಯನ್ನೇ ಚೀಲದೊಳಗೆ ಕಟ್ಟಿರುವುದು ತಿಳಿದು ಬಂದಿದೆ.
ಯುವತಿ, ಮಹಿಳೆ ಸೇರಿ ಐವರು ಇದ್ದ ತಂಡ ಈ ಹುಚ್ಚಾಟ ಮಾಡಿದೆ. ಬಳಿಕ ಅವರಿಂದ ಕ್ಷಮಾಪಣೆ ಬರೆಸಿಕೊಂಡು ಬಿಟ್ಟುಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಮೆ ಕೋರಿದ ಯುವತಿ
ನಾವು ಐದು ಮಂದಿ ಸೇರಿ ವೈಯಾಲಿಕಾವಲ್‌ನ ಕೊರಿಯರ್ ಆಫೀಸ್‌ನಲ್ಲಿ ನನ್ನ ತಂದೆ ಅವರನ್ನು ಚೀಲದಲ್ಲಿ ಹಾಕಿ ತೆಗೆದುಕೊಂಡು ಹೋಗಿದ್ವಿ. ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ಬಸ್‌ಗಳ ಪ್ರಯಾಣ ದರ ಹೆಚ್ಚಾಗಿದ್ದು, ಜತೆಗೆ ಸೀಟು ಸಿಗುತ್ತಿಲ್ಲ ಎಂಬ ಸಂದೇಶ ನೀಡಲು ಈ ಒಂದು ಫ್ರ್ಯಾಂಕ್ ವಿಡಿಯೋ ಮಾಡಲಾಯಿತು.
ಈ ರೀತಿ ಮಾಡುವುದು ತಪ್ಪು ಅಂತಾ ಗೊತ್ತಿರಲಿಲ್ಲ. ಇದು ತಪ್ಪು ಎಂದು ಗೊತ್ತಾಗಿದೆ ಹೀಗಾಗಿ ಕ್ಷಮೆ ಕೋರುತ್ತಿದ್ದೇವೆ. ಈ ರೀತಿ ಯಾರು ಮಾಡಬೇಡಿ. ನಮ್ಮಿಂದ ಇನ್ನೊಮ್ಮೆ ಈ ರೀತಿಯ ತಪ್ಪು ಆಗುವುದಿಲ್ಲ. ನಮ್ಮನ್ನು ಕ್ಷಮಿಸಿ ಎಂದು ಯುವತಿ ವಿಡಿಯೋದಲ್ಲಿ ಕ್ಷಮೆ ಕೇಳಿದ್ದಾಳೆ.




