ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ರಾಮಚಂದ್ರ ರಾವ್ ಅವರ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ.
ವಿಡಿಯೋಗಳು ನಕಲಿ ಅಥವಾ ‘ಎಐ’ (Artificial Intelligence) ಸೃಷ್ಟಿತ ಎಂಬ ಅವರ ವಾದವನ್ನು ತನಿಖಾ ವರದಿ ತಳ್ಳಿಹಾಕಿದ್ದು, ಆ ವಿಡಿಯೋಗಳು ‘ಅಸಲಿ’ ಎಂದು ವಿಧಿವಿಜ್ಞಾನ ಪ್ರಯೋಗಾಲಯ (FSL) ದೃಢಪಡಿಸಿದೆ.
ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ಮೂವರು ಐಪಿಎಸ್ ಅಧಿಕಾರಿಗಳ ತನಿಖಾ ಸಮಿತಿಯು ಸುಮಾರು 100 ಪುಟಗಳ ಸುದೀರ್ಘ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.ವಿಡಿಯೋಗಳು ಬಹಿರಂಗವಾದಾಗ ರಾಮಚಂದ್ರ ರಾವ್ ಅವರು, “ಇವು ನನ್ನ ತೇಜೋವಧೆ ಮಾಡಲು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋಗಳು” ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಎಫ್‌ಎಸ್‌ಎಲ್ ತಜ್ಞರು ಇವುಗಳಲ್ಲಿ ಯಾವುದೇ ಎಡಿಟಿಂಗ್ ಅಥವಾ ಎಐ ಬಳಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಡಿಯೋಗಳು 2016-17ರಲ್ಲಿ ರಾಮಚಂದ್ರ ರಾವ್ ಅವರು ಬೆಳಗಾವಿ ಐಜಿಪಿ ಆಗಿದ್ದ ಅವಧಿಯಲ್ಲಿ ಅವರ ಕಚೇರಿಯಲ್ಲೇ ಚಿತ್ರೀಕರಣಗೊಂಡಿವೆ ಎನ್ನಲಾಗಿದೆ. ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಇದೀಗ ಸಾಬೀತಾದಂತಾಗಿದೆ.
ಮಹಿಳೆಯರೇ ಚಿತ್ರೀಕರಿಸಿದ್ದರು: ಲಭ್ಯವಿರುವ ಮಾಹಿತಿ ಪ್ರಕಾರ, ಈ ವಿಡಿಯೋಗಳನ್ನು ಆ ಸಮಯದಲ್ಲಿ ಅವರ ಜೊತೆಗಿದ್ದ ಮಹಿಳೆಯರೇ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಜನವರಿಯಲ್ಲಿ ಆಗಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದ ರಾಮಚಂದ್ರ ರಾವ್ ಅವರು ಮಹಿಳೆಯರ ಜೊತೆ ನಡೆಸಿದ್ದಾರೆ ಎನ್ನಲಾದ ಅನುಚಿತ ವರ್ತನೆಯ ವಿಡಿಯೋಗಳು ಬಹಿರಂಗವಾಗಿದ್ದವು.
ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಿತು. ಅಲ್ಲದೆ ಈ ವಿಡಿಯೋಗಳ ಸತ್ಯಾಸತ್ಯತೆ ಪರಿಶೀಲನೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಚಾರಣಾ ಸಮಿತಿಯನ್ನು ರಚಿಸಿತು.
ಸುಮಾರು 2 ತಿಂಗಳು ವಿಚಾರಣೆ ನಡೆಸಿದ ಸಮಿತಿ, ಆ ವಿಡಿಯೋಗಳ ಪರೀಕ್ಷೆಗೆ ಎಫ್‌ಎಸ್‌ಎಲ್‌ಗೆ ರವಾನಿಸಿತು. ಇವುಗಳನ್ನು ಪರಿಶೀಲಿಸಿ ಆ ವಿಡಿಯೋಗಳು ಅಸಲಿ ಎಂದು ಸಮಿತಿಗೆ ಎಫ್‌ಎಸ್‌ಎಲ್ ತಜ್ಞರು ವರದಿ ಸಲ್ಲಿಸಿದ್ದಾರೆ.
ಒಟ್ಟಾರೆ ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಲು ‘ತಂತ್ರಜ್ಞಾನ’ದ ಮೊರೆ ಹೋಗಿದ್ದ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರಿಗೆ ಈಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯೇ ಮುಳುವಾಗಿದೆ.
ಬೆಳಗಾವಿ ಐಜಿಪಿ ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ನಡೆದಿದ್ದ ಅಧಿಕಾರದ ದುರುಪಯೋಗ ಮತ್ತು ನೈತಿಕ ಪತನದ ವಿಡಿಯೋಗಳು ಅಸಲಿ ಎಂದು ಸಾಬೀತಾಗಿದ್ದು, ಪೊಲೀಸ್ ಇಲಾಖೆಯ ಘನತೆಗೆ ಕಪ್ಪುಚುಕ್ಕೆ ಹಚ್ಚಿದ ಅಧಿಕಾರಿಯ ವಿರುದ್ಧ ಸರ್ಕಾರ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.




