ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಮರ್ಥ್ ಶಾಮನೂರು ಅವರಿಗೆ ನೀಡಿದ್ದಕ್ಕೆ ಅಲ್ಪಸಂಖ್ಯಾತ ಮುಸ್ಲಿಂ ಮುಖಂಡರು ಸಿಡಿದೆದ್ದಿದ್ದು, ಕೈ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಸಂಬಂಧ ಅಲ್ಪಸಂಖ್ಯಾತರನ್ನು ಮನವೊಲಿಸುತ್ತೇವೆ, ಅವರಿಗೆ ಬೇರೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಲ್ಪಸಂಖ್ಯಾತರಲ್ಲಿನ ಅಸಮಾಧಾನ ಹೋಗಲಾಡಿಸಲು ಪ್ರಯತ್ನ ಮಾಡುತ್ತೇವೆ. ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ 100% ಗೆಲ್ಲುವ ವಿಶ್ವಾಸ ಇದೆ ಎಂದರು.
ಈ ಹಿಂದೆ ಬಿಜೆಪಿಯವರು ಇದೇ ರೀತಿ ಹೇಳಿದ್ದರು. ಬಸವರಾಜ್ ಬೊಮ್ಮಾಯಿ, ಕುಮಾರಸ್ವಾಮಿ ಪುತ್ರ ಗೆಲ್ತಾರೆ ಅಂತ ಹೇಳಿದ್ದರು, ಸೋತರು. ನಾವು ನುಡಿದಂತೆ ನಡೆದಿದ್ದೇವೆ, ಗ್ಯಾರಂಟಿ ಕೊಟ್ಟಿದ್ದೇವೆ. ಬೈ ಎಲೆಕ್ಷನ್ ಗೆದ್ದು ಸಾಬೀತು ಮಾಡಿದ್ದೇವೆ ಎಂದು ಹೇಳಿದರು.
ಬಡವರು, ಅಲ್ಪಸಂಖ್ಯಾತರು, ರಾಜ್ಯದ ಜನ ನಮ್ಮ ಪರವಾಗಿ ಇದ್ದಾರೆ. ಈ ಉಪಚುನಾವಣೆಲ್ಲಿ ಬಿಜೆಪಿ ಗೆಲ್ಲೋದಿಲ್ಲ, ದಿಕ್ಸೂಚಿ ಹೇಗೆ ಆಗುತ್ತದೆ?. ನಾವು ಅಧಿಕಾರದಲ್ಲಿ ಇದ್ದೇವೆ, ನಮಗೆ ಸಂಪೂರ್ಣ ಗೆಲ್ಲುವ ವಿಶ್ವಾಸವಿದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕಡೇ ಸೋಲುತ್ತದೆ ಎಂದರು.




