ಹುಬ್ಬಳ್ಳಿ: ಕಡಿದು ಬಿದ್ದ ಕೇಬಲ್ ವೈರ್ಗೆ ಸಿಲುಕಿ ಬೈಕ್ ಸವಾರರಿಬ್ಬರು ಸಾವಿಗೀಡಾದಂತಹ ದುರಂತ ಘಟನೆ ಇಂದು ಮುಂಜಾನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರೋ ಅರ್ಬನ್ ಓಯಾಸಿಸ್ ಮಾಲ್ ಬಳಿ ಈ ದುರಂತ ನಡೆದಿದೆ.
ಮೃತ ಬೈಕ್ ಸವಾರರಿಬ್ಬರು ತಮ್ಮ 20ರ ಹರೆಯದಲ್ಲಿದ್ದು, ಮೃತರನ್ನು 25 ವರ್ಷದ ಫಯಾಜ್ ಹಾಗೂ 27 ವರ್ಷದ ಮುಜಾಮಿಲ್ ಎಂದು ಗುರುತಿಸಲಾಗಿದೆ.
ಮೃತರು ಹುಬ್ಬಳ್ಳಿಯ ತಾಜ್ ನಗರದ ನಿವಾಸಿಗಳಾಗಿದ್ದಾರೆ. ರಸ್ತೆ ಮೇಲೆ ಕೇಬಲ್ ವೈರ್ ಕಡಿದು ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ.
ಕೇಬಲ್ ವೈರ್ಗೆ ಸಿಲುಕಿ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿದ್ದರಿಂದ ಇಬ್ಬರು ರಸ್ತೆಗೆ ಬಿದ್ದು, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.




