ಗದಗ : ಗದಗ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಜಾತಿ ಸಂಘರ್ಷ ಭುಗಿಲೆದ್ದಿದೆ. ಎಸ್ಟಿ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದಿದ್ದಕ್ಕೆ ಮಾರಾಮಾರಿ ನಡೆದಿದ್ದು, ಒಟ್ಟು 24 ಮಂದಿ ಗಾಯಗೊಂಡಿದ್ದಾರೆ.ಎರಡೂ ಸಮುದಾಯಗಳ ನಡುವೆ ಹೊಡೆದಾಟ ನಡೆದಿದೆ.
ಕೊಡ್ಲಿ, ಬಡಿಗೆ ಮತ್ತು ಕಲ್ಲುಗಳನ್ನು ಬಳಸಿಕೊಂಡು ಒಬ್ಬರ ಮೇಲೊಬ್ಬರು ನಡೆಸಿದ ದಾಳಿಯಲ್ಲಿ ಎಸ್ಸಿ ಸಮುದಾಯದ ಮಹಿಳೆಯರು ಸೇರಿ ಒಟ್ಟು 24 ಮಂದಿ ಗಾಯಗೊಂಡಿದ್ದು, ಮೂವರ ತಲೆಗೆ ಗಂಭೀರ ಗಾಯಗಳಾಗಿವೆ.
ಹಲವರಿಗೆ ಕೈ-ಕಾಲು ಮುರಿದಿದ್ದು, ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಮೂರು ವಾರ್ಡ್‌ಗಳಿಗೆ ಪೊಲೀಸರು ಕಟ್ಟು ನಿಟ್ಟಿನ ಭದ್ರತೆ ಒದಗಿಸಿದ್ದಾರೆ.
ಎಸ್ಟಿ ಸಮುದಾಯದ ಒಂಬತ್ತು ಮಂದಿ ಗಾಯಗೊಂಡಿದ್ದು, ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಹಳೆಯ ವೈಷಮ್ಯವೂ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಎಸಿ ಗಂಗಪ್ಪ ಗಾಯಾಳುಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಶಾಂತಿ ಸಭೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.




