ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ
ಹೊಸಪೇಟೆ : ಗ್ರಾಹಕರು ಯಾವುದೇ ರೀತಿಯ ಉತ್ಪನ್ನ ಖರೀದಿಸಬೇಕಾದರೆ ಉತ್ಪನ್ನದ ಪ್ರಮಾಣ ಮತ್ತು ಗುಣಮಟ್ಟ ಖಾತರಿ ಪಡಿಸಿಕೊಂಡು ಖರೀದಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಹೇಳಿದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಗ್ರಾಹಕನೂ ತಾನು ಖರೀದಿಸುವ ವಸ್ತುಗಳ ಗುಣಮಟ್ಟ, ತೂಕ ಮತ್ತು ಅಳತೆ ಪ್ರಮಾಣದ ಬಗ್ಗೆ ಅರಿತಿರಬೇಕು. ಗ್ರಾಹಕನೇ ಮಾರುಕಟ್ಟೆಯ ರಾಜ ಎನ್ನುವ ಮಾತು ಅನ್ವಯವಾಗಬೇಕಾದರೆ, ಗ್ರಾಹಕರು ಸಹ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು. ಗ್ರಾಹಕರು ವಿವಿಧ ಮಾಧ್ಯಮಗಳಲ್ಲಿ ಬಿತ್ತರಿಸುವ ಆಕರ್ಷಣೀಯ ಜಾಹೀರಾತುಗಳಿಗೆ ಮಾರು ಹೋಗಿ ಉತ್ಪನ್ನ ಖರೀದಿಸಬಾರದು. ಬದಲಾಗಿ ಉತ್ಪನ್ನದ ಗುಣಮಟ್ಟ, ಸುರಕ್ಷತೆಯ ಬಗ್ಗೆ ಪರಿಶೀಲಿಸಿ ಖರೀದಿಸಬೇಕು. ಯಾವುದೇ ವಸ್ತು, ಉತ್ಪನ್ನ ಖರೀದಿಸಿದಾಗ ತಪ್ಪದೇ ಅಧಿಕೃತ ಬಿಲ್ ಅಥವಾ ರಶೀದಿ ಪಡೆಯಬೇಕು. ಉತ್ಪನ್ನ ಖರೀದಿಸಿದಾಗ ಲೋಪದೋಷ ಉಂಟಾದಾಗ ದೂರು ದಾಖಲಿಸಲು ಅಥವಾ ಗ್ರಾಹಕರ ಹಕ್ಕು ಪ್ರತಿಪಾದಿಸಲು ಸಹಕಾರಿಯಾಗಲಿದೆ. ವ್ಯಾಪಾರಸ್ಥರು ಕಡ್ಡಾಯವಾಗಿ ಮುದ್ರೆ ಹಾಕಿಸಿದ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನೇ ಬಳಸಬೇಕು. ಗ್ರಾಹಕರಿಗೆ ಈ ಬಗ್ಗೆ ಅನುಮಾನವಿದ್ದಲ್ಲಿ ತಕ್ಷಣ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬಹುದು. ವಸ್ತು ಅಥವಾ ಸೇವೆಯಲ್ಲಿ ನ್ಯೂನತೆ ಕಂಡುಬಂದಲ್ಲಿ ಗ್ರಾಹಕರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ . ಕಾನೂನಾತ್ಮಕವಾಗಿ ನ್ಯಾಯ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಕರುಣಾನಿಧಿ ಗ್ರಾಹಕ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಗ್ರಾಹಕರ ದಿನಾಚರಣೆ ಪ್ರಯುಕ್ತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ತಾತ್ಕಾಲಿಕ ಸ್ಟಾಲ್ ಸ್ಥಾಪಿಸಿ ಗ್ರಾಹಕರಿಗೆ ಅರಿವು ಮೂಡಿಸಲಾಯಿತು.
ಈ ವೇಳೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರಿಯಾಜ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಮನೋಜ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ್, ಕಾರ್ಯದರ್ಶಿ ಕೃಷ್ಣದೇವರಾಯಲು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಹಕರು ಉಪಸ್ಥಿತರಿದ್ದರು.




