ಬೆಂಗಳೂರು: 8 ಲಕ್ಷ ರೂಪಾಯಿ ನಗದನ್ನು ಬ್ಯಾಗಲ್ಲಿಟ್ಟುಕೊಂಡು ವಿಧಾನಸೌಧ ಒಳಗೆ ಪ್ರವೇಶಿಸಲು ಯತ್ನಿಸಿದ ಯುವಕನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ 8 ಲಕ್ಷ ರೂ ನಗದು ಇದ್ದ ಬ್ಯಾಗ್ ನೊಂದಿಗೆ ಕೆಂಗಲ್ ಗೇಟ್ ಮೂಲಕ ವಿಧಾನಸೌಧ ಪ್ರವೇಶಿಸಲು ಯತ್ನಿಸಿದ ಯುವಕನನ್ನು ತಪಾಸಣೆಗೆ ಒಳಪಡಿಸಿದಾಗ ಹಣ ಪತ್ತೆಯಾಗಿದೆ.
ಯುವಕ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರ ಲೆಟರ್ ಹೆಡ್ ಪಡೆಯಲು ಬಂದಿರುವುದಾಗಿ ಹೇಳಿಕೊಂಡಿದ್ದಾನೆ.ಇಷ್ಟು ದೊಡ್ಡ ಮಟ್ಟದ ಹಣವನ್ನು ಒಳಗೆ ಒಯ್ಯುವಂತಿಲ್ಲ. ವಾಪಸ್ ಹೋಗಿ ಎಂದು ಪೊಲೀಸರು ಸೂಚಿಸಿದ್ದಾರೆ.
ಆದರೆ ಶಾಸಕರನ್ನು ನೋಡಲೇಬೇಕು ಎಂದು ಯುವಕ ಹಠ ಹಿಡಿದು ಒಳಗೆ ಹೋಗಲು ಮುಂದಾದಾಗ ಆತನನ್ನು ವಶಕ್ಕೆ ಪಡೆದು ಎಸಿಪಿ ಕೃಷ್ಣಯ್ಯ ಅವರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ.
ನಾನು ಇಂಡಿ ಕ್ಷೇತ್ರದವನು. ದೊಡ್ಡಪ್ಪನಿಗೆ ಹುಷಾರಿಲ್ಲ, ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗಾಗಿ ಹಣ ತಂದಿದ್ದೇನೆ. ಅಲ್ಲದೆ ಶಾಸಕರ ಬಳಿ ಕೆಲಸವಿದ್ದ ಕಾರಣ ವಿಧಾನಸೌಧಕ್ಕೆ ಬಂದಿದ್ದೇನೆ ಎಂದು ಯುವಕ ಹೇಳಿಕೊಂಡಿದ್ದು, ವಿಧಾನಸೌಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




