ಬೆಳಗಾವಿ: ಬೆಳಗಾವಿ ತಾಲೂಕಿನ ಬೋಡಕ್ಯಾನಟ್ಟಿ ಗ್ರಾಮದ ರೈತ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಮೀನು ಸಾಕಾಣಿಕೆಯಲ್ಲಿ (Fish Farming) ಯಶಸ್ಸು ಕಂಡಿದ್ದಾರೆ. ಅವರ ಸಾಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಮನ್ ಕಿ ಬಾತ್ನಲ್ಲಿ ಉಲ್ಲೇಖಿಸಿದ್ದಾರೆ.
ಆ ಮೂಲಕ ದೇಶಾದ್ಯಂತ ಕನ್ನಡಿಗನ ಹೆಸರು ಮೊಳಗಿದೆ. ಲಕ್ಷಾಂತರ ರೂ ಆದಾಯ ಗಳಿಸುತ್ತಿರುವ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಅವರ ಕಥೆ ನಿಜಕ್ಕೂ ರೋಚಕವಾಗಿದೆ. ಸದ್ಯ ಹುದ್ದಾರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
30 ಲಕ್ಷಕ್ಕೂ ಅಧಿಕ ಖರ್ಚು: ಮೂರು ವರ್ಷದಿಂದ ಮೀನು ಸಾಗಾಣಿಕೆ
ಬೋಡಕ್ಯಾನಟ್ಟಿ ಎನ್ನುವ ಪುಟ್ಟ ಗ್ರಾಮದಲ್ಲಿ ಶಿವಲಿಂಗಪ್ಪ ಅವರು ತಮ್ಮ ಪುತ್ರ ರಾಜು ನೆರವಿನಿಂದ ಒಂದು ಎಕರೆಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನವನ್ನು ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಮೀನುಗಾರಿಕೆಗೆ 30 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಆರಂಭಿಸಿರುವ ಶಿವಲಿಂಗಪ್ಪ, ಕಳೆದ ಮೂರು ವರ್ಷದಿಂದ ಮೀನು ಸಾಗಾಣಿಕೆ ಮಾಡುತ್ತಿದ್ದಾರೆ.




