ತುಮಕೂರು: ನಡೆದಾಡುವ ದೇವರೆಂದೇ ಖ್ಯಾತರಾದ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಕಾರ್ಯಕ್ರಮ ಇಂದು ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ.ಬುಧವಾರ ಗುರುವಂದನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗದ್ದುಗೆ, ದೇವಸ್ಥಾನ ಸೇರಿದಂತೆ ಮಠವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮಹಾಪ್ರಸಾದ ವಿನಿಯೋಗ ಇರಲಿದೆ. ಶ್ರೀಮಠದ ಪ್ರಾರ್ಥನಾ ಮಂದಿರ, ಶ್ರೀ ಶಿವಕುಮಾರ ಸ್ವಾಮೀಜಿ ದಾಸೋಹ ಮಂಟಪ, ಸಮುದಾಯ ಭವನ, ಅತಿಥಿ ಗೃಹಗಳು ಸೇರಿದಂತೆ ಆರು ಕಡೆಗಳಲ್ಲಿ ಪ್ರಸಾದ ನಿಲಯ ನಿರ್ಮಿಸಲಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರ ದಾಸೋಹ ನಡೆಯಲಿದೆ. ಕಳೆದ ನಾಲ್ಕೈದು ದಿನಗಳಿಂದ ಬಾಣಸಿಗರು ಸಿಹಿ ಖಾದ್ಯ ತಯಾರಿಸಿದ್ದಾರೆ.
ಶ್ರೀಮಠದ ಗೋಸಲಸಿದ್ದೇಶ್ವರ ವೇದಿಕೆಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕೇಂದ್ರ ಸಚಿವರು, ರಾಜ್ಯದ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಬೆಳಗಿನ ಜಾವ ಗದ್ದುಗೆಯಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದೆ.




