ಧಾರವಾಡ: ಇಲ್ಲಿನ ಜಿಲ್ಲಾಧಿಕಾರಿಗಳ (DC) ಕಚೇರಿ ಕಾಂಪೌಂಡ್ (Compund) ಬಳಿ ಕಿಡಿಗೇಡಿಗಳು ವಾಮಾಚಾರ (Black Magic) ನಡೆಸಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ಕಚೇರಿ ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಸಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಯಾರೋ ಕಿಡಿಗೇಡಿಗಳು ತಡರಾತ್ರಿ ವಾಮಾಚಾರದಂತಹ ಕೃತ್ಯವೆಸಗಿದ್ದಾರೆ.
ಸ್ಥಳದಲ್ಲಿ ಮೊಟ್ಟೆ, ಬಾಳೆಹಣ್ಣು, ವೀಳ್ಯದೆಲೆ ಹಾಗೂ ನಿಂಬೆಹಣ್ಣುಗಳನ್ನು ಬಳಸಿ ವಿಧಿವಿಧಾನ ಮಾಡಿದ ಗುರುತುಗಳು ಪತ್ತೆಯಾಗಿವೆ.
ಜಿಲ್ಲೆಯ ಅತ್ಯಂತ ಪ್ರಮುಖ ಕಚೇರಿಯಾದ ಡಿಸಿ ಕಚೇರಿಯ ಬಳಿಯೇ ಇಂತಹ ಘಟನೆ ನಡೆದಿರುವುದು ಸಿಬ್ಬಂದಿ ವರ್ಗದಲ್ಲಿ ಭೀತಿ ಮೂಡಿಸಿದೆ.
ಕಚೇರಿಗೆ ಕೆಲಸದ ನಿಮಿತ್ತ ಬರುವ ಸಾರ್ವಜನಿಕರು ಸಹ ಈ ದೃಶ್ಯ ಕಂಡು ಗಾಬರಿಯಾಗಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಯಾರನ್ನೋ ಗುರಿಯಾಗಿಸಿ ಮಾಡಿದ ವಾಮಾಚಾರವೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.




