ಪಾವಗಡ:ತಾಲೂಕು ಕಚೇರಿಯ ಆವರಣದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ (ADLR) ಕಚೇರಿ ಈಗ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಅಧಿಕಾರಿಗಳ ಸಮಯ ಪ್ರಜ್ಞೆಯಿಲ್ಲದ ನಡವಳಿಕೆ ಮತ್ತು ಸಿಬ್ಬಂದಿಗಳ ಉದ್ಧಟತನದಿಂದಾಗಿ ಪ್ರತಿನಿತ್ಯ ನೂರಾರು ರೈತರು ಕೆಲಸವಾಗದೆ ಕಚೇರಿ ಬಾಗಿಲಿಂದಲೇ ವಾಪಸ್ ಹೋಗುವಂತಾಗಿದೆ.ಅಧಿಕಾರಿಗಳ ಗೈರುಹಾಜರಿ – ರೈತರ ಪರದಾಟಮುಖ್ಯ ಅಧಿಕಾರಿಯಾದ ADLR ಅವರು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ.
ದೂರದ ಹಳ್ಳಿಗಳಿಂದ ಬಸ್ ಬಾಡಿಗೆ ಕಟ್ಟಿಕೊಂಡು ಬರುವ ರೈತರು, ಅಧಿಕಾರಿಯ ದರ್ಶನಕ್ಕಾಗಿ ದಿನವಿಡೀ ಕಾಯುವಂತಾಗಿದೆ.
ರೈತರ ಅಹವಾಲುಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಕಚೇರಿಗೆ ಬೀಗ ಹಾಕಿರುವುದು ಅಥವಾ ಕಾಣಿಸಿಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದಾಖಲೆಗಳಿಗಾಗಿ ಅಲೆದಾಟ – ಭ್ರಷ್ಟಾಚಾರದ ಆರೋಪ ಭೂಮಾಪನ ಶಾಖೆ ಹಾಗೂ ಅಭಿಲೇಖಾಲಯದಲ್ಲಿ LR ಟಿಪ್ಪಣಿ, ಆಕಾರಬಂದ್, RR ಪಕ್ಕಾ ಮತ್ತು ಮೂಲ ಟಿಪ್ಪಣಿಗಳಿಗಾಗಿ ಅರ್ಜಿ ಸಲ್ಲಿಸಿದರೂ ರೈತರಿಗೆ ಸಕಾಲದಲ್ಲಿ ದಾಖಲೆ ಸಿಗುತ್ತಿಲ್ಲ.
ಸರ್ಕಾರಿ ಶುಲ್ಕ ಪಾವತಿಸಿ ಸರ್ವೆ ನಕ್ಷೆಗಾಗಿ ಕಾದು ಕುಳಿತರೂ ಕೆಲಸಗಳು ನಡೆಯುತ್ತಿಲ್ಲ.
ಇದರಿಂದ ರೈತರು ತಮ್ಮ ಜಮೀನಿನ ನೋಂದಣಿ ಹಾಗೂ ಇತರ ವ್ಯವಹಾರಗಳನ್ನು ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸ್ಥಳೀಯ ಸಿಬ್ಬಂದಿಗಳ ದರ್ಪ ಮತ್ತು ರಾಜಕೀಯ ಬೆಂಬಲ ಕಚೇರಿಯಲ್ಲಿರುವ ಸಿಬ್ಬಂದಿಗಳು ಸ್ಥಳೀಯರೇ ಆಗಿರುವುದರಿಂದ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ”
ರಾಜಕೀಯ ಪ್ರಭಾವ ಹೊಂದಿರುವ ಈ ಸಿಬ್ಬಂದಿಗಳು, ಕೆಲಸದ ಬಗ್ಗೆ ಪ್ರಶ್ನಿಸಿದ ರೈತರಿಗೆ ‘ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ’ ಎಂದು ಅವಾಜ್ ಹಾಕುತ್ತಿದ್ದಾರೆ. ಸಿಬ್ಬಂದಿಗಳ ಈ ದೌರ್ಜನ್ಯದಿಂದಾಗಿ ಕಚೇರಿ ಈಗ ಸಾರ್ವಜನಿಕ ಸೇವಾ ಕೇಂದ್ರವಾಗದೆ, ದರ್ಪದ ಕೇಂದ್ರವಾಗಿ ಮಾರ್ಪಟ್ಟಿದೆ” ಎಂದು ರೈತರು ಆಳಲು ತೋಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ನೊಂದ ರೈತನ ಅಳಲು ಬಿ.ಕೆ. ಹಳ್ಳಿಯ ರೈತರಾದ ತಿಪ್ಪೇಸ್ವಾಮಿ ಅವರು ಮಾತನಾಡಿ, “ನಾನು ಕಳೆದ ನಾಲ್ಕು ದಿನಗಳಿಂದ LR ಟಿಪ್ಪಣಿ ಮತ್ತು ಆಕಾರಬಂದ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಅಲೆಯುತ್ತಿದ್ದೇನೆ.
ಆದರೆ ಕಚೇರಿಯ ಸಿಬ್ಬಂದಿಗಳು ‘ನಮಗೆ ಬೇರೆ ಕೆಲಸವಿದೆ, ಅರ್ಜಿ ತೆಗೆದುಕೊಳ್ಳುವುದಿಲ್ಲ’ ಎಂದು ವಾಪಸ್ ಕಳುಹಿಸುತ್ತಿದ್ದಾರೆ.
ನಮ್ಮ ಹಕ್ಕಿನ ದಾಖಲೆ ಪಡೆಯಲು ನಾವು ಯಾರ ಕಾಲು ಹಿಡಿಯಬೇಕು?” ಎಂದು ಪ್ರಶ್ನಿಸಿದ್ದಾರೆ.
ದಲಿತ ಮುಖಂಡರ ಎಚ್ಚರಿಕೆರೈತರ ಈ ಶೋಚನೀಯ ಸ್ಥಿತಿಯ ಬಗ್ಗೆ ಮಾತನಾಡಿದ ದಲಿತ ಯುವ ಮುಖಂಡ ಆ ಬಂಡ ಗೋಪಾಲ, “ಪಾವಗಡ ತಾಲೂಕು ಆಡಳಿತ ಮತ್ತು ಸ್ಥಳೀಯ ಶಾಸಕರು ತಕ್ಷಣವೇ ಮಧ್ಯಪ್ರವೇಶಿಸಿ ಈ ಇಲಾಖೆಯನ್ನು ಶುದ್ಧೀಕರಿಸಬೇಕು. ಭ್ರಷ್ಟ ಹಾಗೂ ಬೇಜವಾಬ್ದಾರಿ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.
ಮಾತನಾಡಿದವರು ದಲಿತ ಯುವ ಮುಖಂಡ ಆ ಬಂಡ ಗೋಪಾಲ ಗೋಪಾಲ ಒಟ್ಟಾರೆಯಾಗಿ, ಪಾವಗಡ ADLR ಕಚೇರಿ ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗುವ ಮುನ್ನ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸಬೇಕಿದೆ.
ಸಮಯಪಾಲನೆ ಇಲ್ಲದ ADLR: ಕಚೇರಿ ಅವಧಿಯಲ್ಲಿ ಅಧಿಕಾರಿಗಳ ಗೈರುಹಾಜರಿ ಅಕ್ಷಮ್ಯ.ಕರ್ತವ್ಯ ಲೋಪ: ಸರ್ಕಾರಿ ಶುಲ್ಕ ಕಟ್ಟಿದರೂ ನಕ್ಷೆ ನೀಡದಿರುವುದು ಕಾನೂನು ಉಲ್ಲಂಘನೆ.ಉದ್ಧಟತನದ ವರ್ತನೆ: ಸಿಬ್ಬಂದಿಗಳ ಮೇಲೆ ಸಾರ್ವಜನಿಕ ಸೇವಕರ ನಡವಳಿಕೆ ನಿಯಮದಡಿ (Service Rules) ಕ್ರಮ ಜರುಗಿಸಲು ಆಗ್ರಹ.
ಪಾರದರ್ಶಕತೆ ಕೊರತೆ: ದಾಖಲೆಗಳ ನೀಡಿಕೆಯಲ್ಲಿ ಅನಗತ್ಯ ವಿಳಂಬ ಮತ್ತು ವ್ಯವಹಾರದ ವಾಸನೆ ಕೊಂಡು ಬಂದೈತೆ ಎಂದು ತಿಳಿಸಿದರು.
ವರದಿ:ಶಿವಾನಂದ




