ಆಟೋಗಳಿಗೆ ಬಳಸುವ ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಗೋ ಗ್ಯಾಸ್ 1)ಎಂಬ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ನಲ್ಲಿ ಆಟೋ ಚಾಲಕರು ಗ್ಯಾಸ್ ಫಿಲ್ಲಿಂಗ್ ಬಂದ್ ಮಾಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ಕಳೆದ 10 ದಿನಗಳಿಂದ ಆಟೋಗಳಿಗೆ ಗ್ಯಾಸ್ ಸಿಗದೇ ಪರದಾಡುತ್ತಿದ್ದು, ಇಂದು ಬೆಳಿಗ್ಗೆ ಗೋ ಗ್ಯಾಸ್ ಕಂಪನಿಯ ಫಿಲ್ಲಿಂಗ್ ಸ್ಟೇಷನ್ಗೆ ಗ್ಯಾಸ್ ಟ್ಯಾಂಕರ್ವೊಂದು ಗ್ಯಾಸ್ ಡಂಪ್ ಮಾಡಿ ಹೋಗಿದೆ. ಆದರೆ. ಗ್ಯಾಸ್ ದರ ಲೀಟರ್ಗೆ 120 ಮಾಡಿದ್ದು, ಗ್ಯಾಸ್ ಹಾಕಿಸಿಕೊಳ್ಳಲು ಬಂದ ಆಟೋ ಚಾಲಕರು ಆತಂಕಗೊಂಡಿದ್ದಾರೆ.
ಭಾರತ್ ಗ್ಯಾಸ್ ಸೇರಿ ಬೇರೆ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ನಲ್ಲಿ 91-96ರೂ. ಲೀಟರ್ಗೆ ದರ ಇದ್ದು, ಆದರೆ ಗೋ ಗ್ಯಾಸ್ ಕಂಪನಿ ಏಕಾಏಕಿ 40 ರೂ. ಏರಿಕೆ ಮಾಡಿ, 120ರೂ. ಪ್ರತಿ ಲೀಟರ್ಗೆ ಹೇಳುತ್ತಿದ್ದು, ಇದರಿಂದ ಆಟೋ ಓಡಿಸಿ, ಅದರಲ್ಲಿ ಹಣ ಉಳಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಆಟೋ ಚಾಲಕರು ಅಸಮಧಾನ ವ್ಯಕ್ತಪಡಿಸಿದರು.
2-3 ದಿನಗಳ ಹಿಂದೆ ಲೀಟರ್ಗೆ 84 ರೂ.ದರ ನಿಗಧಿ ಮಾಡಿದ್ದರು. ಆದರೆ ಇದೀಗ ಏಕಾಏಕಿ ದರವನ್ನು 120ರೂ. ಮಾಡಿದ್ದು, ಆಟೋ ಚಾಲಕರು ಬದುಕು ನಡೆಸುವುದು ಕಷ್ಟಕರವಾಗಿದೆ. ಕೂಡಲೇ ಜಿಲ್ಲಾಡಳಿತ ಆಟೋ ಚಾಲಕರ, ಆಟೋ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ ಮಾಲೀಕರ ಹಾಗೂ ಕಂಪನಿ ಅಧಿಕಾರಿಗಳ ಸಭೆ ಕರೆದು ದರ ಏರಿಕೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಲ್ಲಿ ಡಿಸಿ ಕಚೇರಿ ಮುತ್ತಿಗೆ ಹಾಕಲು ಆಟೋ ಚಾಲಕರು ಒಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಆಟೋ ಚಾಲಕ ಭಾಷಾ ಮಾತನಾಡಿ, ಆಟೋಗಳಿಗೆ ಬಳಸುವ ಗ್ಯಾಸ್ ದರವನ್ನು ಲೀಟರ್ಗೆ 120 ರೂ.ಗೆ ಏರಿಸಿರುವುದರಿಂದ ತೀವ್ರ ಸಮಸ್ಯೆ ಉಂಟಾಗಿದೆ, ಹಿಂದಿನಿಂದ ಒಂದು ಲೀಟರ್ ಗ್ಯಾಸ್ 89 ರೂ.ದಿಂದ 91ರೂ.ಗೆ ಲಭ್ಯವಾಗುತ್ತಿದ್ದು, ಇದೀಗ ದರ ಏರಿಕೆಯಿಂದ ಚಾಲಕರಿಗೆ ಆರ್ಥಿಕ ಭಾರ ಹೆಚ್ಚಾಗಿದೆ. ದರ ಹೆಚ್ಚಳದಿಂದಾಗಿ ಅನೇಕ ಚಾಲಕರು ಗ್ಯಾಸ್ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದ ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸರ್ಕಾರ ತಕ್ಷಣ ಗ್ಯಾಸ್ ದರವನ್ನು ಇಳಿಸಿ, ಆಟೋ ಚಾಲಕರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಆಟೋ ಚಾಲಕರ ಸಂಘದ ಜಿಲಾನಿ ಮಾತನಾಡಿ, ಆಟೋಗಳಿಗೆ ಬಳಸುವ ಗ್ಯಾಸ್ ದರವನ್ನು 120 ರೂ.ಗೆ ಏರಿಸಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ ಗ್ಯಾಸ್ ದರ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ತಿಂಗಳಿಗೆ ಆಟೋ ಕಂತು ಕಟ್ಟಬೇಕಿರುವುದರ ಜೊತೆಗೆ, ಮನೆ ನಡೆಸುವುದು ಕಷ್ಟಕರವಾಗಿದೆ. ಆರ್ಥಿಕ ಸಂಕಷ್ಟ ಹೆಚ್ಚಾಗಿದೆ. ಗ್ಯಾಸ್ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ ಅವರು, ತಕ್ಷಣ ಗ್ಯಾಸ್ ದರವನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ವರದಿ: ಗಾರಲದಿನ್ನಿ ವೀರನಗೌಡ




