ಬೆಂಗಳೂರು: ಕಾರ್ಖಾನೆಯ ದ್ವಾರದಲ್ಲಿ ಸಿಬ್ಬಂದಿಯೊಬ್ಬರಿಗೆ ಜಾತಿ ನಿಂದನೆ ಮಾಡುವುದು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಮೂಲಕ ಆರೋಪಿಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ:
ಧಾರವಾಡದ ‘ಸ್ಪ್ಯಾಮ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ ಕಂಪನಿಯ ಮಾಲೀಕರಾದ ಶ್ಯಾಮ್ ಮೆಹ್ತಾ, ಬಿಮಲ್ ಮೆಹ್ತಾ ಮತ್ತು ನೀಪಾ ಮೆಹ್ತಾ ಎಂಬುವವರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಧಾರವಾಡ ಪೀಠವು ಈ ಆದೇಶ ನೀಡಿದೆ.
ಸಾರ್ವಜನಿಕ ಪ್ರದೇಶವೆಂದರೆ ಕೇವಲ ಸಾರ್ವಜನಿಕರು ಮಾತ್ರ ಇರಬೇಕು ಎಂದರ್ಥವಲ್ಲ. ಕಾರ್ಖಾನೆಯ ಸರಕು ಸಾಗಣೆಯ ದ್ವಾರವು ನಿರ್ಜನ ಪ್ರದೇಶವಲ್ಲ. ಅಲ್ಲಿ ಕೆಲಸಗಾರರು ಸುಲಭವಾಗಿ ಓಡಾಡುತ್ತಿರುತ್ತಾರೆ, ಆದ್ದರಿಂದ ಅದನ್ನು ಸಾರ್ವಜನಿಕ ಪ್ರದೇಶವೆಂದೇ ಪರಿಗಣಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
ಕಾರ್ಖಾನೆಯ ಗೇಟ್ ಬಳಿ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ನೌಕರನನ್ನು ಜಾತಿ ಹೆಸರಿನಲ್ಲಿ ನಿಂದಿಸಿದರೆ, ಅದು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(1)(ಆರ್) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ.
ಅರ್ಜಿ ವಜಾ: ಘಟನೆ ನಡೆದ ಸ್ಥಳವು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುವ ಸ್ಥಳವಾದ್ದರಿಂದ, ಆರೋಪಿಗಳ ವಿರುದ್ಧದ ಕಾನೂನು ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ತಿಳಿಸಿ ಮಾಲೀಕರ ಅರ್ಜಿಯನ್ನು ವಜಾಗೊಳಿಸಿದೆ.




