ಬೆಂಗಳೂರು: ಶಾಸಕ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿರುವ ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪನ್ನು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.
ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಆರೋಪಿಗಳ ಭವಿಷ್ಯ ನಿರ್ಧಾರವಾಗಲಿದೆ.ಸುಮಾರು ಎಂಟು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಅಂತಿಮ ಆದೇಶ ನೀಡಲಿದೆ.
2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಧಾರವಾಡ ಉಪನಗರ ಠಾಣೆ ಪೊಲೀಸರು ತನಿಖೆ ನಡೆಸಿ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಆರು ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.
ಯೋಗೇಶ್ ಗೌಡ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ 2019ರ ಸೆಪ್ಟೆಂಬರ್ ನಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದ್ದು, ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂದು ತಿಳಿದುಬಂದಿತ್ತು.
ವಿನಯ್ ಕುಲಕರ್ಣಿಯವರನ್ನು 2020ರ ನವೆಂಬರ್ 5ರಂದು ಸಿಬಿಐ ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 21 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಪ್ರಮುಖ ಆರೋಪಿ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.




