ಕೊಟ್ಟಿಗೆಹಾರ : ಮನುಷ್ಯನ ಕಣ್ಣಾಲಿಗಳು ಒದ್ದೆಯಾಗುವಂತಹ ಕರುಣಾಜನಕ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಅನಾರೋಗ್ಯದಿಂದ ಮೃತಪಟ್ಟ ಪತಿಯ ಶವದೊಂದಿಗೆ, ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಬರೋಬ್ಬರಿ ಹತ್ತು ದಿನಗಳ ಕಾಲ ಒಂದೇ ಮನೆಯಲ್ಲಿ ಕಳೆದಿದ್ದಾರೆ.
ಘಟನೆಯ ಹಿನ್ನೆಲೆ
ಮೃತಪಟ್ಟವರನ್ನು ಸಿರಿಲ್ ಮೋನಿಸ್ ಎಂದು ಗುರುತಿಸಲಾಗಿದೆ. ಇವರು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಹಾರದ ನಿವಾಸಿಯಾಗಿದ್ದರು. ಮೋನಿಸ್ ಅವರು ಸುಮಾರು 10 ದಿನಗಳ ಹಿಂದೆಯೇ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಇವರ ಪತ್ನಿ ಮಾನಸಿಕ ಅಸ್ವಸ್ಥರಾಗಿದ್ದರಿಂದ, ಪತಿ ಸತ್ತಿರುವ ವಿಷಯವೇ ಅವರಿಗೆ ತಿಳಿದಿರಲಿಲ್ಲ.
ಹತ್ತು ದಿನಗಳ ಕಾಲ ನರಕಸದೃಶ ವಾಸ
ಪತಿ ಮಲಗಿದ್ದಾರೆಂದೇ ಭಾವಿಸಿದ್ದ ಪತ್ನಿ, ಕಳೆದ ಹತ್ತು ದಿನಗಳಿಂದ ಶವದ ಪಕ್ಕದಲ್ಲೇ ಕಳೆದಿದ್ದಾರೆ. ಮೃತದೇಹ ಸಂಪೂರ್ಣ ಕೊಳೆತು ನಾರುತ್ತಿದ್ದರು, ಹುಳುಗಳು ಬಿದ್ದಿದ್ದರೂ ಸಹ ಆಕೆಗೆ ಅದರ ಅರಿವಾಗಿರಲಿಲ್ಲ. ಮನೆಯಿಂದ ವಿಪರೀತ ದುರ್ನಾತ ಬರತೊಡಗಿದಾಗ ಸ್ಥಳೀಯರು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಣಕಲ್ ಪೊಲೀಸರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
15 ದಿನಗಳ ಹಿಂದೆ ಊರಿಗೆ ಬಂದು ಮಗ ತಂದೆ-ತಾಯಿಯನ್ನು ನೋಡಿಕೊಂಡು ಹೋಗಿದ್ದನು. ನಂತರ ಪ್ರತಿನಿತ್ಯ ತಾಯಿಗೆ ಕರೆ ಮಾಡಿದ್ದನು. ಕರೆ ಮಾಡಿದಾಗ ತಾಯಿ ತಂದೆ ಚೆನ್ನಾಗಿದ್ದಾರೆ ಎಂದೇ ಹೇಳುತ್ತಿದ್ದನು. ಪಾಪ ಮಗನಿಗೆ ತಂದೆ ಸತ್ತಿರುವ ವಿಷಯವೇ ಗೊತ್ತಿರಲಿಲ್ಲ.
ನನ್ನ ಗಂಡ ಬೇಕು ಎಂದು ಪತ್ನಿಯ ಅಳಲು
ಪೊಲೀಸರು ಮತ್ತು ಸ್ಥಳೀಯರು ಶವವನ್ನು ಹೊರತೆಗೆಯಲು ಮುಂದಾದಾಗ, ಪತ್ನಿ ತೀವ್ರವಾಗಿ ವಿರೋಧಿಸಿದ್ದಾರೆ. “ನನ್ನ ಗಂಡನಿಗೆ ಏನೂ ಆಗಿಲ್ಲ, ಅವರು ಮಲಗಿದ್ದಾರೆ. ಯಾರೂ ನನ್ನ ಗಂಡನನ್ನು ಮುಟ್ಟಬೇಡಿ, ನನಗೆ ನನ್ನ ಗಂಡ ಬೇಕು” ಎಂದು ಅಳುತ್ತಾ ಪಟ್ಟು ಹಿಡಿದಿದ್ದು ನೋಡುಗರ ಕರುಳು ಹಿಂಡುವಂತಿತ್ತು.
ಮಾನವೀಯತೆ ಮೆರೆದ ಸಮಾಜ ಸೇವಕ ಆರೀಫ್:
ಶವ ಸಂಪೂರ್ಣವಾಗಿ ಕೊಳೆತು ಹುಳು ಬಿದ್ದಿದ್ದರಿಂದ ಅದನ್ನು ಮುಟ್ಟಲು ಸ್ಥಳೀಯರು ಹಿಂಜರಿಯುತ್ತಿದ್ದರು. ಈ ಸಂದರ್ಭದಲ್ಲಿ ಮೂಡಿಗೆರೆಯ ಪ್ರಸಿದ್ಧ ಸಮಾಜ ಸೇವಕ ಆರೀಫ್ ಅವರು ಮಾನವೀಯತೆ ಮೆರೆದಿದ್ದಾರೆ.
ಕೊಳೆತ ಶವವನ್ನು ಅತೀ ಜಾಗರೂಕತೆಯಿಂದ ಹಾಗೂ ಗೌರವಯುತವಾಗಿ ದಮನ (ಅಂತ್ಯಕ್ರಿಯೆ) ಮಾಡಲು ಮುಂದೆ ಬಂದಿರುವ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಪುತ್ರ ಬೆಂಗಳೂರಿನಲ್ಲಿ ಉದ್ಯೋಗಿ:
ದಂಪತಿಯ ಪುತ್ರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಂದೆಯ ಸಾವಿನ ಸುದ್ದಿ ತಿಳಿದು ಊರಿಗೆ ಧಾವಿಸಿದ್ದಾರೆ. ಮನೆಯಲ್ಲಿ ತಂದೆ-ತಾಯಿ ಇಬ್ಬರೇ ವಾಸವಿದ್ದರು ಎನ್ನಲಾಗಿದೆ.
ಈ ಘಟನೆಯು ಮಾನಸಿಕ ಅಸ್ವಸ್ಥರ ಕುಟುಂಬದವರ ದಯನೀಯ ಸ್ಥಿತಿಯನ್ನು ಕನ್ನಡಿ ಹಿಡಿಯುವಂತಿದೆ. ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.




