ಗುರುಮಠಕಲ್ : ತಾಲೂಕಿನ ಕಾಕಲವಾರ ಪಂಚಾಯತ್ನಲ್ಲಿ ನೀರು-ಸ್ವಚ್ಛತೆ ಸಂಕಷ್ಟ ತೀವ್ರ” ಅದಗೆಟ್ಟಿದೆ
ಕಾಕಲವಾರ ಎಂ ಟಿ ಪಲ್ಲಿ ಬೋರಬಂಡ್ ಸಿದ್ದಾಪುರ ಬುದುರು ಗ್ರಾಮಗಳಲ್ಲಿ ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದ್ದಂತೆಯೇ ಕಾಕಲವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ನರಳುತ್ತಿರುವುದು ದುಃಖಕರ ಸಂಗತಿಯಾಗಿದೆ. ಸರ್ಕಾರದ ಸ್ಪಷ್ಟ ಆದೇಶಗಳಿದ್ದರೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅವುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಅಧಿಕಾರಿಗಳ ಸೂಚನೆಗಳಿಗೂ ಕಿಮ್ಮತ್ತು ನೀಡದೆ, ಜನರ ಸಮಸ್ಯೆಗಳತ್ತ ಸಂಪೂರ್ಣ ಅನಾಸಕ್ತಿ ತೋರಿಸುತ್ತಿರುವ ಅಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮೂಲಭೂತ ಸೌಕರ್ಯಗಳೇ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ದಿನನಿತ್ಯ ಕುಡಿಯುವ ನೀರಿಗಾಗಿ ಅಲೆದಾಡುವ ದುಸ್ಥಿತಿ ಉಂಟಾಗಿದೆ. ಇದಕ್ಕೆ ಸೇರ್ಪಡೆಯಾಗಿ, ಗ್ರಾಮಗಳಲ್ಲಿ ಸ್ವಚ್ಛತೆ ಸಂಪೂರ್ಣ ಕುಸಿದಿದ್ದು, ಅಸ್ವಚ್ಛ ಪರಿಸರ ಜನರ ಆರೋಗ್ಯಕ್ಕೂ ಭಾರೀ ಅಪಾಯ ತಂದೊಡ್ಡುತ್ತಿದೆ. ಹಲವು ಬಾರಿ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಇಲ್ಲದೆ ಇರುವುದನ್ನು ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯೆಂದು ಜನರು ಖಂಡಿಸಿದ್ದಾರೆ. ತಾಲೂಕು ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮೇಲ್ವಿಚಾರಣೆಯ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣವೆಂದು ಆರೋಪಗಳು ಕೇಳಿಬಂದಿವೆ. ಜನರ ತಾಳ್ಮೆ ಮೀರಿ ಹೋಗಿದ್ದು, ತಕ್ಷಣ ಕ್ರಮ ಕೈಗೊಂಡು ನೀರು ಹಾಗೂ ಸ್ವಚ್ಛತೆ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಉಗ್ರ ಹೋರಾಟಕ್ಕೆ ಇಳಿಯುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ವರದಿ : ರವಿ ಬುರನೋಳ್




