ಹಾಸನ: ಪ್ರೀತಿ ಎಂಬ ಮಾಯೆ ಎಂತಹ ಕೆಲಸವನ್ನಾದರೂ ಮಾಡಿಸುತ್ತದೆ ಎಂಬುದಕ್ಕೆ ಹಾಸನ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.
ಎಂಟು ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ ಮಹಿಳೆಯೊಬ್ಬರು, ಈಗ ತನ್ನ ಹಳೇ ಪ್ರೇಮಿಯ ಜೊತೆ ರಾತ್ರೋರಾತ್ರಿ ಪರಾರಿಯಾಗಿ ಕಾರಿನಲ್ಲೇ ಮದುವೆಯಾಗಿರುವ ವಿಚಿತ್ರ ಘಟನೆ ವರದಿಯಾಗಿದೆ.
ಘಟನೆಯ ಹಿನ್ನೆಲೆ:
ಹಾಸನ ಜಿಲ್ಲೆಯ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದರಿ ಮಹಿಳೆಗೆ 8 ವರ್ಷಗಳ ಹಿಂದೆಯೇ ಸಂಬಂಧಿಕರೊಬ್ಬರ ಜೊತೆ ವಿವಾಹವಾಗಿತ್ತು. ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು ಎನ್ನಲಾಗಿತ್ತಾದರೂ, ಇತ್ತೀಚೆಗೆ ಮಹಿಳೆಗೆ ತನ್ನ ಹಳೆಯ ಲವರ್ ಜೊತೆ ಸಂಪರ್ಕ ಬೆಳೆದಿತ್ತು ಎನ್ನಲಾಗಿದೆ.
ಸಾಂತ್ವನ ಕೇಂದ್ರದಲ್ಲಿ ನಾಟಕ:
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಪ್ರಕರಣ ಪೊಲೀಸರ ಮೆಟ್ಟಿಲೇರಿತ್ತು. ಆಗ ಕುಟುಂಬಸ್ಥರು ಮತ್ತು ಪೊಲೀಸರು ಸಂಧಾನ ನಡೆಸಿ, ಮಹಿಳೆಗೆ ತಿಳಿಹೇಳಿದ್ದರು.
ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೂ ದಾಖಲಿಸಿದ್ದರು. ಆ ಸಮಯದಲ್ಲಿ “ನಾನು ಪತಿಯ ಜೊತೆಯೇ ಇರುತ್ತೇನೆ” ಎಂದು ನಂಬಿಸಿದ ಮಹಿಳೆ, ಮನೆಗೆ ಮರಳಿದ ಬೆನ್ನಲ್ಲೇ ತನ್ನ ಅಸಲಿ ಮುಖ ತೋರಿಸಿದ್ದಾಳೆ.
ರಾತ್ರೋರಾತ್ರಿ ಎಸ್ಕೇಪ್ – ಕಾರಿನಲ್ಲೇ ಮದುವೆ!
ಪತಿಯ ಮಾತು ನಂಬಿ ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ, ಪ್ರಿಯಕರನಿಗೆ ಫೋನ್ ಮಾಡಿ ಕರೆಸಿಕೊಂಡ ಮಹಿಳೆ ಯಾರಿಗೂ ತಿಳಿಯದಂತೆ ಎಸ್ಕೇಪ್ ಆಗಿದ್ದಾಳೆ. ಕೇವಲ ಓಡಿ ಹೋದದ್ದಷ್ಟೇ ಅಲ್ಲದೆ, ಪ್ರಿಯಕರನ ಜೊತೆ ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡಿದ್ದಾಳೆ.
ವೈರಲ್ ವಿಡಿಯೋ: ಚಲಿಸುವ ಕಾರಿನಲ್ಲೇ ಪ್ರಿಯಕರ ಮಹಿಳೆಗೆ ತಾಳಿ ಕಟ್ಟಿ, ಕಾಲಿಗೆ ಕಾಲುಂಗರ ತೊಡಿಸಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ತನ್ನನ್ನು ನಂಬಿಸಿ ಮನೆಗೆ ಬಂದ ಪತ್ನಿ ಹೀಗೆ ಮಾಡುತ್ತಾರೆ ಎಂದು ಊಹಿಸದ ಪತಿ ಮತ್ತು ಆಕೆಯ ಕುಟುಂಬಸ್ಥರು ಈ ಘಟನೆಯಿಂದ ಕಂಗಾಲಾಗಿದ್ದಾರೆ. ಸದ್ಯ ಈ ಘಟನೆ ಗೊರೂರು ಭಾಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.




