ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗಾಜರಕೋಟ್ ಗ್ರಾಮದಲ್ಲಿ ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ಮೃತ ಬಾಲಕನನ್ನು ಪುನೀತ್ (4) ಎಂದು ಗುರುತಿಸಲಾಗಿದೆ. ಪ್ರತಿದಿನದಂತೆ ಶಾಲಾ ಬಸ್ ವಿದ್ಯಾರ್ಥಿಗಳನ್ನು ಗ್ರಾಮಕ್ಕೆ ಬಿಟ್ಟು ಹೋಗಲು ಬಂದಿತ್ತು. ಬಸ್ಸಿನಿಂದ ಇಳಿದ ಬಳಿಕ ಚಾಲಕ ಹಿಂದೆ ಗಮನಿಸದೇ ಬಸ್ ರಿವರ್ಸ್ ತೆಗೆದುಕೊಂಡಿದ್ದು, ಈ ವೇಳೆ ಬಸ್‌ನ ಹಿಂಬದಿ ಚಕ್ರ ಬಾಲಕನ ಮೇಲೆ ಹರಿದಿದೆ. ತೀವ್ರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಘಟನೆಯ ನಂತರ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




