ಹಾಪುರ್(ಉತ್ತರ ಪ್ರದೇಶ): ಬಹುತೇಕ ಮಹಿಳೆಯರಿಗೆ 45 ವರ್ಷ ತುಂಬುತ್ತಲೇ ಮಗು ಹೆರುವ ಸಾಮರ್ಥ್ಯ ಕ್ಷಿಣಿಸುತ್ತಾ ಬರುತ್ತೆ. ಬಹುತೇಕರು ಋತುಚಕ್ರದ ಬಂಧಗಳಿಂದ ಹೊರಗೆ ಬರುವ ಹಂತದಲ್ಲಿ ಇರುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ 50ನೇ ವಯಸ್ಸಿನಲ್ಲೂ ಗರ್ಭವತಿ ಆಗಿದ್ದಾರೆ.
50 ವರ್ಷ ವಯಸ್ಸಿನ ಮಹಿಳೆಯೊಬ್ಬರು ಆಂಬ್ಯುಲೆನ್ಸ್‌ನಲ್ಲಿ ತನ್ನ 14ನೇ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
50ರ ಹರೆಯದಲ್ಲಿ ಹೆರಿಗೆ ನೋವು: ಮಾಹಿತಿಯ ಪ್ರಕಾರ, ಪಿಳಖುವಾ ಕಾಲೊನಿಯ ಮೊಹಲ್ಲಾ ಬಜರಂಗಪುರಿಯ ನಿವಾಸಿ ಇಮಾಮುದ್ದೀನ್ ಅವರ 50 ವರ್ಷದ ಗರ್ಭಿಣಿ ಪತ್ನಿ ಗುಡಿಯಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಪಿಳಖುವಾದ ಸಿಎಚ್‌ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಗರ್ಭಿಣಿ ಪರೀಕ್ಷಿಸಿ ಮೀರತ್ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಮಾರ್ಗ ಮಧ್ಯೆಯೇ ಆಂಬ್ಯುಲೆನ್ಸ್ನಲ್ಲೇ ಹೆರಿಗೆ: ನಂತರ 108 ಆಂಬ್ಯುಲೆನ್ಸ್ ಮೂಲಕ ಸಿಎಚ್‌ಸಿ ಆಸ್ಪತ್ರೆಯಿಂದ ಗರ್ಭಿಣಿ ಮಹಿಳೆಯನ್ನು ಮೀರತ್ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅವರಿಗೆ ಹೆರಿಗೆ ನೋವು ಹೆಚ್ಚಾಗಿದೆ. ಈ ವೇಳೆ ಆಂಬ್ಯುಲೆನ್ಸ್ ಸಿಬ್ಬಂದಿ ಡೆಲಿವರಿ ಕಿಟ್ ಸಹಾಯದಿಂದ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.
ಈ ಮೂಲಕ ಗುಡಿಯಾ ಅವರು ಆಂಬ್ಯುಲೆನ್ಸ್‌ನಲ್ಲಿಯೇ ತನ್ನ 14ನೇ ಮಗುವಿಗೆ ಜನ್ಮ ನೀಡಿದರು. ಹೆರಿಗೆಯ ನಂತರ ತಾಯಿ ಮತ್ತು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಬಾಣಂತಿ ತಾಯಿ ಜೊತೆ 22 ವರ್ಷದ ಪುತ್ರ ಇದ್ದರು.