ಮಿರ್ಜಾಪುರ (ಉತ್ತರ ಪ್ರದೇಶ): ಪ್ರೀತಿಯಲ್ಲಿದ್ದ ಯುವ ಜೋಡಿಯೊಂದು ಆಸ್ಪತ್ರೆಯಲ್ಲೆ ಮದುವೆಯಾಗಿದೆ! ಇದು ಅಚ್ಚರಿ ಅನ್ನಿಸಿದರೂ ಸತ್ಯ. ಮದುವೆಂದರೆ ಸಡಗರ, ಸಂಭ್ರಮ, ಫೋಟೋಶೂಟ್, ಹಾಡು, ಕುಣಿತ, ಬಗೆ ಬಗೆಯ ಖಾದ್ಯಗಳು, ಕುಟುಂಬಸ್ಥರು, ಸಂಬಂಧಿಕರು, ಹೊಸ ಉಡುಪುಗಳು ಬೇಕೇ ಬೇಕು ಅಂತೇನಿಲ್ಲ. ತಮ್ಮಿಷ್ಟದ ಮದುವೆಯನ್ನು ಎಲ್ಲಿಬೇಕಾದರೂ, ಹೇಗೆ ಬೇಕಾದರೂ ಆಗಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಮಿರ್ಜಾಪುರದ ಜಿಗಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಗೋಗಾಂವ್ ನಿವಾಸಿ ಶಿವರಾಜ್ ಸಿಂಗ್ ಮತ್ತು ಲಾಲ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪುಚ್ನಿಪುರ ನಿವಾಸಿ ಪುಷ್ಪಾಂಜಲಿ ಸಿಂಗ್ ಆಸ್ಪತ್ರೆಯಲ್ಲಿ ಹಸೆಮಣೆ ಏರಿ ಅಚ್ಚರಿ ಮೂಡಿಸಿದ ದಂಪತಿ. ಕಾಲು ಮುರಿತದಿಂದ ಶಿವರಾಜ್ ಸಿಂಗ್ ಕಳೆದ ಎಂಟು ತಿಂಗಳಿನಿಂದ ಮಿರ್ಜಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ವಿಷಯ ತಿಳಿದು ಇಲ್ಲಿಗೆ ಬಂದ ಪ್ರಿಯತಮೆ ಪುಷ್ಪಾಂಜಲಿ ಸಿಂಗ್ ತನ್ನನ್ನು ತಕ್ಷಣ ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದ್ದಾಳೆ. ಬೇರೆ ದಾರಿ ಇಲ್ಲದ್ದರಿಂದ ಪುಷ್ಪಾಂಜಲಿ ಸಿಂಗ್ ಹಣೆಗೆ ಶಿವರಾಜ್ ಸಿಂಗ್ ಆಸ್ಪತ್ರೆಯ ಬೆಡ್ ಮೇಲೆಯೇ ತಿಲಕ ಇಡುವ ಮೂಲಕ ಹಸೆಮಣೆ ಏರಿದರು.