ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ನಗರದ ಕೋಡಿಭಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸುಮಾರು 60 ವರ್ಷ ಹಳೆಯ ಸೇತುವೆ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ.
ಕಾರವಾರ ಮತ್ತು ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿದ ಸೇತುವೆ ಇದಾಗಿದ್ದು, ಸೇತುವೆ ಕುಸಿತದಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣದ ವೇಳೆ ಹೊಸ ಸೇತುವೆ ನಿರ್ಮಿಸಲಾಗಿದ್ದು, ಇನ್ನೊಂದು ಮಾರ್ಗಕ್ಕೆ ಹಳೆ ಸೇತುವೆ ಬಳಸಲಾಗುತ್ತಿತ್ತು.
ಹಳೆ ಸೇತುವೆ ಮೇಲೆ ಲಾರಿ ಚಲಿಸುವಾಗಲೇ ಕುಸಿದು ಬಿದ್ದಿದೆ. ತಮಿಳುನಾಡು ಮೂಲದ ಲಾರಿ ಚಾಲಕ ಬಾಲಮುರುಗನ್(37) ಸಮೇತ ಲಾರಿ ನದಿಗೆ ಬಿದ್ದಿದೆ.
ಲಾರಿಯ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ರಕ್ಷಣೆಗೆ ಕೂಗಾಡಿದ್ದು, ಬೀಟ್ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಲಾರಿ ಚಾಲಕನ ಪ್ರಾಣ ಉಳಿಸಿದ್ದಾರೆ.
ಸ್ಥಳೀಯ ಮೀನುಗಾರರು ಹಾಗೂ ಪೊಲೀಸ್ ಸಿಬ್ಬಂದಿ ಬೋಟ್ ಮೂಲಕ ಲಾರಿ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೊಂದು ಹೊಸ ಸೇತುವೆಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಳೆ ಸೇತುವೆ ಕುಸಿತದಲ್ಲಿ ಇನ್ನೂ ಕೆಲವು ವಾಹನಗಳು ಬಿದ್ದ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.