ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯ ತಿರುವಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಟಾಟಾ ಏಸ್ ವಾಹನದ ನಡುವೆ ಢಿಕ್ಕಿ ಸಂಭವಿಸಿದ್ದು ಟಾಟಾ ಏಸ್ ವಾಹನವು ರಸ್ತೆಯ ಪಕ್ಕದಲ್ಲಿ ಹಾಕಿದ್ದ ಬೃಹತ್ ಗಾತ್ರದ ವಿದ್ಯುತ್ ಕಂಬವನ್ನು ಹತ್ತಿ ಪಪಂ ಹಾಕಿದ್ದ ಕಬ್ಬಿಣದ ಕಂಬವನ್ನು ಮುರಿದುಕೊಂಡು ರಾಘವೇಂದ್ರ ಭವನ್ ಹತ್ತಿರಕ್ಕೆ ಹೋಗಿ ನಿಂತಿದೆ.
ಟಾಟಾ ಏಸ್ ವಾಹನವು ನಿಲ್ಲದೆ ಮುಂದೆ ಚಲಿಸಿದ್ದರೆ ರಾಘವೇಂದ್ರ ಭವನ್ ಹೋಟೆಲ್ ಒಳಕ್ಕೆ ನುಗ್ಗಬೇಕಿತ್ತು, ಅಲ್ಲದೆ ಹೋಟೆಲ್ ಮುಂಭಾಗ ನಿಂತಿದ್ದ ಹತ್ತಾರು ಮಂದಿಯ ಮೇಲೆ ವಾಹನ ಢಿಕ್ಕಿ ಹೊಡೆದು ನಾಗರೀಕರಿಗೆ ಗಾಯಗಳಾಗುವ ಅಥವಾ ಪ್ರಾಣಾಪಾಯವಾಗುವ ಸಾಧ್ಯತೆಗಳು ಹೆಚ್ಚಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಹಾಗೂ ಪ್ರಾಣಾಪಾಯಗಳಾಗಿಲ್ಲ. ಟಾಟಾ ಏಸ್ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರಣ ವಾಹನದ ಮುಂಭಾಗ ಜಖಂಗೊಂಡಿದೆ.

ತಿಪಟೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಪಟ್ಟಣದ ದಬ್ಭೇಘಟ್ಟ ರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ತೆರಳಿ ಹಿಂದಿರುಗುವಾಗ ದಬ್ಬೇಘಟ್ಟ, ತಿಪಟೂರು ರಸ್ತೆ ಸಂಪರ್ಕ ವೃತ್ತದಲ್ಲಿ ಘಟನೆ ಸಂಭವಿಸಿದೆ. ರಸ್ತೆಯ ತಿರುವಿನಲ್ಲಿ ಸಾರಿಗೆ ಬಸ್ ತಿರುವು ಪಡೆಯುವಾಗ ತಿಪಟೂರು ರಸ್ತೆ ಕಡೆಯಿಂದ ವೇಗವಾಗಿ ಬಂದ ಟಾಟಾ ಏಸ್ ಹಾಲಿನ ವಾಹನವು ಬಸ್ಸಿಗೆ ಢಿಕ್ಕಿ ಹೊಡೆದುಕೊಂಡು ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಹಾಕಿದ್ದ ಬೃಹತ್ ವಿದ್ಯುತ್ ಕಂಬವನ್ನು ಏರಿ ಹೋಟೆಲ್ ಕಡೆಗೆ ನುಗ್ಗಿತು ಎನ್ನಲಾಗಿದೆ. ಟಾಟಾ ಏಸ್ ಹಾಲಿನ ವಾಹನದ ಚಾಲಕ ದುಂಡ ಗ್ರಾಮದ ವೇಣುಗೋಪಾಲ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಟಾಟಾ ಏಸ್ ಹಾಗೂ ಸಾರಿಗೆ ಬಸ್ ಎರಡನ್ನೂ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ವರದಿ: ಗಿರೀಶ್ ಕೆ ಭಟ್




