ಬಲರಾಂಪುರ, ಛತ್ತೀಸ್ಗಢ : ಬಲರಾಂಪುರದಲ್ಲಿ ಮರಳು ಕಳ್ಳಸಾಗಣೆದಾರರ ಭಯ ಕಾಣಿಸಿಕೊಂಡಿದೆ. ಕಳ್ಳಸಾಗಣೆ ತಡೆಯಲು ಹೋಗಿದ್ದ ಗಸ್ತು ತಂಡದ ಕಾನ್ಸ್ಟೇಬಲ್ ಅವರನ್ನು ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಲಾಗಿದೆ. ಕನ್ಹಾರ್ ನದಿಯ ಬಳಿ ಕಳ್ಳಸಾಗಣೆ ತಡೆಯಲು ಹೋಗಿದ್ದ ಕಾನ್ಸ್ ಟೇಬಲ್ ಶಿವ್ ಬಚ್ಚನ್ ಸಿಂಗ್ ಅವರನ್ನು ಮರಳು ತುಂಬಿದ ಟ್ರ್ಯಾಕ್ಟರ್‌ನಿಂದ ಕಳ್ಳಸಾಗಣೆದಾರರು ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ, ಕಾನ್ಸ್ಟೇಬಲ್ ದೇಹದ ಪಂಚನಾಮೆ ನಡೆಸಿದ್ದಾರೆ. ಆ ಬಳಿಕ ಮರಣೋತ್ತರ ಪರೀಕ್ಷೆಗಾಗಿ ರಾಮಾನುಜ್‌ಗಂಜ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸನಾವಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್: ಶಿವ ಬಚ್ಚನ್ ಸಿಂಗ್ ಸನಾವಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಈ ಸಂದರ್ಭದಲ್ಲಿ ಸನಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಧೌಲಿ ಗ್ರಾಮದ ಕನ್ಹಾರ್ ನದಿಯಿಂದ ಅಕ್ರಮ ಮರಳು ಗಣಿಗಾರಿಕೆ ಮತ್ತು ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತು. ಈ ಮಾಹಿತಿ ಅನ್ವಯ ಪೊಲೀಸ್ ಗಸ್ತು ತಂಡ ತಡರಾತ್ರಿ ಸ್ಥಳಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಮರಳು ತುಂಬಿದ ವಾಹನವನ್ನು ನಿಲ್ಲಿಸಲು ಕಾನ್ಸ್ಟೇಬಲ್ ಶಿವ ಬಚ್ಚನ್ ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಟ್ರ್ಯಾಕ್ಟರ್ ಚಾಲಕ ಅವರ ಮೇಲೆ ಗಾಡಿ ಹತ್ತಿಸಿದ್ದಾನೆ. ಇದರಿಂದ ಪೊಲೀಸ್ ಪೇದೆ ಶಿವ ಬಚ್ಚನ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಕಾನ್ಸ್ಟೇಬಲ್ ಧಮ್ನಿ ಗ್ರಾಮದ ನಿವಾಸಿಯಾಗಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕೃತ್ಯ ನಡೆಸಿದವರ ವಿರುದ್ಧ ತನಿಖೆಗೆ ಸಿದ್ಧರಾಗಿದ್ದಾರೆ. ಈ ಕುರಿತಂತೆ ಮಾತನಾಡಿರುವ ಬಲರಾಂಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ರಮಣಲಾಲ್ , ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಎಸ್‌ಡಿಒಪಿ ಸೇರಿದಂತೆ ಐದು ಪೊಲೀಸ್ ಠಾಣೆಗಳ ತಂಡಗಳು ಪ್ರಕರಣದ ತನಿಖೆಗೆ ತೆರಳಿವೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.




