ಬೆಂಗಳೂರು : ಹಿಂದುಳಿದ ದಲಿತ ಮಠಾಧೀಶ್ವರರ ಒಕ್ಕೂಟದ ಸ್ವಾಮೀಜಿಗಳ ನಿಯೋಗವು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ವಿವಿಧ ಬೇಡಿಕೆಗಳನ್ನು ಕುರಿತು ಚರ್ಚಿಸಿದರು.
ಸ್ವಾಮೀಜಿಗಳ ನಿಯೋಗದ ಬೇಡಿಕೆಯಂತೆ ಎಲ್ಲಾ ದಲಿತ ಮತ್ತು ಹಿಂದುಳಿದ ಮಠಗಳಿಗೆ ಅನುದಾನ ನೀಡಲಾಗುವುದು. ಹಿಂದುಳಿದ ಮತ್ತು ದಲಿತ ಅರ್ಚಕರನ್ನು ರೂಪಿಸಲು ಅನುಕೂಲ ಆಗುವ ರೀತಿ ಗುರುಕುಲ ಆರಂಭಿಸಲು ಚಿತ್ರದುರ್ಗ ಜಿಲ್ಲೆಯಲ್ಲಿ ಜಾಗ ನೀಡುವಂತೆ ನಿಯೋಗ ಮನವಿ ಮಾಡಿದ್ದು, ಜಾಗ ಗುರುತಿಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಎಲ್ಲಾ ಹಿಂದುಳಿದ ಮತ್ತು ದಲಿತ ಮಠಗಳಿಗೆ ಬೆಂಗಳೂರಿನಲ್ಲಿ ನಿವೇಶನ ಒದಗಿಸುವಂತೆ ಮಾಡಿರುವ ಮನವಿಯನ್ನು ಪರಿಶೀಲನೆ ಮಾಡಲಾಗುವುದು ಎಂದು ನಿಯೋಗಕ್ಕೆ ಸಿಎಂ ಭರವಸೆ ನೀಡಿದರು.