ನವದೆಹಲಿ: ಮುದ್ರಾ ಯೋಜನೆಯ 10ನೇ ವಾರ್ಷಿಕೋತ್ಸವದ ವೇಳೆ ಆಂಧ್ರ ಪ್ರದೇಶದ ಮೂಲದ ಮಹಿಳಾ ಉದ್ಯಮಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಸ್ಪೂರ್ತಿದಾಯಕ ಪ್ರಯಾಣದ ಕುರಿತು ಮಾಹಿತಿ ಹಂಚಿಕೊಂಡರು. ಆದರೆ ತನಗೆ ಹಿಂದಿ ಭಾಷೆ ಗೊತ್ತಿಲ್ಲದ ಕಾರಣ ತೆಲುಗಿನಲ್ಲಿ ಮಾತನಾಡುವುದಾಗಿ ಮಹಿಳೆ ಪ್ರಧಾನಿ ಬಳಿ ನಯವಾಗಿ ವಿನಂತಿಸಿದರು. ಇದಕ್ಕೆ ಪ್ರಧಾನಿ ಮೋದಿ ಒಪ್ಪಿಗೆ ಸೂಚಿಸಿದರು. ಆಗ ಮಹಿಳೆ ತನ್ನ ಯಶಸ್ಸಿನ ಕಥೆಯನ್ನು ವಿವರಿಸಿದರು.
ತೆಲುಗಿನಲ್ಲಿ ಮಾತನಾಡಿದ ಮಹಿಳೆ, “ನನಗೆ 2009ರಲ್ಲಿ ವಿವಾಹವಾಯಿತು. 2019ರ ವರೆಗೆ ನಾನು ಗೃಹಿಣಿಯಾಗಿ ಮನೆಯಲ್ಲೇ ಇದ್ದೆ. ಆನಂತರ ನಾನು ಕೆನರಾ ಬ್ಯಾಂಕಿನ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಸೆಣಬಿನಿಂದ ಗೋಣಿ ಚೀಲ ತಯಾರಿಕೆಯ ಕುರಿತು 13 ದಿನಗಳ ಕಾಲ ತರಬೇತಿ ಪಡೆದೆ. ಬಳಿಕ ಕೆನರಾ ಬ್ಯಾಂಕ್ ನನಗೆ 2 ಲಕ್ಷ ರೂಪಾಯಿ ಮುದ್ರಾ ಸಾಲವನ್ನು ನೀಡಿತು. ಆ ಹಣದಿಂದ ನಾನು 2019 ನವೆಂಬರ್ನಲ್ಲಿ ವ್ಯವಹಾರ ಪ್ರಾರಂಭಿಸಿದೆ” ಎಂದು ತಿಳಿಸಿದರು.
“ಸಾಲ ಮರುಪಾವತಿ ದಾಖಲೆಯನ್ನು ನೋಡಿ, ಬ್ಯಾಂಕ್ ನಂತರ 2022 ರಲ್ಲಿ ನನಗೆ 9.5 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಿತು. ಪ್ರಸ್ತುತ ನನ್ನ ಬಳಿ 15 ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಗೃಹಿಣಿಯರಾಗಿದ್ದಾರೆ. ಈ ಹಿಂದೆ ಅಲ್ಲಿ ತರಬೇತಿ ಪಡೆದಿದ್ದ ನಾನು ಇದೀಗ ನನ್ನಂತಹ ಮಹಿಳೆಯರಿಗೆ ಕೆಲಸ ಕೊಟ್ಟಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಈ ಅವಕಾಶ ಕೊಟ್ಟಿದ್ದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ” ಎಂದು ಹೇಳಿದರು.
ಪ್ರಧಾನಿ ಮೋದಿ ಶ್ಲಾಘನೆ: ಮಹಿಳೆಯ ಯಶೋಗಾಥೆ ಕೇಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು ಮತ್ತು ಇತರ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಅವರ ಪ್ರಯತ್ನವನ್ನು ಶ್ಲಾಘಿಸಿದರು.