ಸಿರುಗುಪ್ಪ: ಭತ್ತದ ನಾಡು ಸಿರುಗುಪ್ಪ ತಾಲ್ಲೂಕಿನ ಬಾಗವಾಡಿ ಗ್ರಾಮದಲ್ಲಿ ಕುರುಬರ ಆರಾಧ್ಯ ದೈವ ತರಸಾಲಪ್ಪ-ಈರನಾಗಪ್ಪ ಉಭಯ ದೇವರ ಉತ್ಸವ ಬುಧವಾರ ಭಕ್ತಿಯೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.

ಹಬ್ಬದಂದು ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನದಿಂದ ತರಸಾಲಪ್ಪ-ಈರನಾಗಪ್ಪ ದೇವರುಗಳನ್ನು ಪಲ್ಲಕ್ಕಿ ಉತ್ಸವದ ಮೂಲಕ ತುಂಗಭದ್ರಾ ನದಿಗೆ ತೆರಳಿ, ಗಂಗಾ ಪೂಜೆ ನೆರೆವೇರಿಸಿ, ಕಂಬಳಿ ಗದ್ದುಗೆ ಹಾಕಿ ದೇವರನ್ನು ಸ್ಥಾಪಿಸಿದರು.
ಛತ್ರ, ಚಾಮರಗಳಿಂದ ಅಲಂಕರಿಸಿ ವಿಶೇಷ ಪೂಜೆ ನಂತರ ಗ್ರಾಮದ ಕುರುಬ ಜನಾಂಗದವರು ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು.
ಹರಕೆ ಹೊತ್ತ ಭಕ್ತರು ಬೆಳಗಿನಿಂದ ಉಪವಾಸ ಇದ್ದು ಸಂಜೆ ಹೂವಿನ ಕಂಕಣ ಕಟ್ಟಿಕೊಂಡು ಮೆರವಣಿಗೆಯಲ್ಲಿ ಸಾಗಿ ನಂತರ ವ್ರತ ಅಂತ್ಯಗೊಳಿಸಿದರು. ಸಂಜೆ ನದಿಯಿಂದ ದೇವರುಗಳನ್ನು ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯೊಂದಿಗೆ ಬೀರಲಿಂಗಪ್ಪನ ಕೋಳಲು ವಾದಕ್ಕೆ, ಡೊಳ್ಳಿ ನೊಂದಿಗೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಡೊಳ್ಳಿನ ಪದಗಳನ್ನು ಹಾಡುತ್ತಾ ಸಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ತೆರಳಿ ಗ್ರಾಮದ ಎಲ್ಲಾ ದೇವತೆಗಳಿಗೆ ಕಾಯಿ ಕರ್ಪೂರ ಅರ್ಪಿಸಿ ಮರಳಿ ದೇವಸ್ಥಾನಕ್ಕೆ ಹೋಗಿ ಮರು ಪ್ರತಿಷ್ಟಾಪನೆ ಮಾಡಿದರು. ಅರ್ಚಕ ಅಯ್ಯಪ್ಪ ದ್ಯಾವಣ್ಣ ಭಕ್ತರಿಗೆ ಭಂಡರ ನೀಡಿ ಹರಸಿದರು.
ಗ್ರಾಮದ ಹಿರಿಯರಾದ ಹಲಗದ ಶಿವಣ್ಣ, ಹಲಗದ ನಾಗರಾಜ, ಉಪ್ಪಳಪ್ಪ, ಕಾರ್ಯಕ್ರಮಗಳ ವಿವರ ನೀಡಿದರು. ಗ್ರಾಮಸ್ಥರಾದ ದೊಡ್ಡಮನಿ ಪದ್ಮಶ್ರೀ ನಾಗರಾಜ, ಮುಖಂಡರಾದ ಬೀರಲಿಂಗಪ್ಪ, ಉಲ್ತಿ ಮಹಾದೇವ, ಹೊಸಮನಿ ಯಲ್ಲಪ್ಪ, ಹಲಗದ ಈರನಾಗಪ್ಪ, ಮಾಡಿಗೆರಿ ಫಕ್ಕೀರಪ್ಪ, ಹಲಗದ ಬೀರಪ್ಪ, ಹೊಸಮನಿ ನಾಗಯ್ಯ, ಕತ್ತೇರ ತಾಯಣ್ಣ, ಆದಿಮನಿ ಪಂಪಣ್ಣ, ಹಲಗದ ವೀರೇಶ, ಪೂಜಾರಿ ನಾಗಪ್ಪ ಮತ್ತಿತರರು ಉತ್ಸವದಲ್ಲಿ ಭಾಗವಹಿಸಿದ್ದರು.
ಸಿರುಗುಪ್ಪ, ಕಾರಟಗಿ, ಆದೋನಿ, ಆಲೂರು, ಸಿಂಧನೂರು, ಬಳ್ಳಾರಿ, ಕುರುಗೋಡು ತಾಲ್ಲೂಕಿನ ಈ ಮನೆ ದೇವರುಗಳ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಉತ್ಸವದಲ್ಲಿ ನೆರೆದಿದ್ದರು.
ಗ್ರಾಮದ ಪಂಚಯ್ಯನ ಮಠದಲ್ಲಿ ಬುಧವಾರ ದೀಪಾವಳಿ ಹಬ್ಬದಂದು ಅಲಂಕೃತ ಮಂಟಪದಲ್ಲಿ ನೋಪಿ ಗೌರಿ ದೇವಿಯನ್ನು ಪ್ರತಿಷ್ಟಾಪಿಸಿ ಪೂಜಿಸಿ, ಕಡಬು, ಕರ್ಜಿಕಾಯಿ, ಉತ್ತುತ್ತಿ, ಕೊಬ್ಬರಿ ಬಟ್ಟಲು, ವೀಳೆದಲೆ, ಅಡಿಕೆ ಅರಿಷಣಕೊಂಬು ಸಮೇತ ನೋಪಿ ನೂಲಿ ಪೂಜಿಸಿ, ಹರಕೆಯ ಭಕ್ತರು ಬಲಗೈಗೆ ಕಟ್ಟಿಸಿಕೊಂಡರು.
ಸಂಜೆ ದೇವಿಗೆ ಸುಮಂಗಲೆಯರು ಆರತಿಗೈದು, ರಾತ್ರಿ ಸಕಲ ವಾದ್ಯ, ಭಜನಾ ತಂಡದ ಮೆರವಣಿಗೆ ಮೂಲಕ ತುಂಗಭದ್ರಾ ನದಿಗೆ ತೆರಳಿ ಗೌರಿಯನ್ನು ವಿಸರ್ಜಿಸಲಾಯಿತು.
ವರದಿ : ಶ್ರೀನಿವಾಸ ನಾಯ್ಕ




