ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಇಂದು ಭೀಕರ ಅಗ್ನಿ ಅವಘಡವೊಂದು ಸಂಭವಿಸಿದ್ದು, ಕಬ್ಬು ಕಟಾವು ಯಂತ್ರದಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಡೀ ಕಬ್ಬಿನ ಗದ್ದೆಯೇ ಸುಟ್ಟು ಭಸ್ಮವಾಗಿದೆ.
ತಾಲ್ಲೂಕಿನ ಘಟ್ಟಿಗನೂರು ಗ್ರಾಮದ ಹೊಲದಲ್ಲಿ ಕಬ್ಬು ಕಟಾವು ಮಾಡುವ ಕಾರ್ಯ ಭರದಿಂದ ಸಾಗುತ್ತಿತ್ತು. ಈ ವೇಳೆ ಕಟಾವು ಮಷಿನ್‌ನ ಎಂಜಿನ್‌ನಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕಿಟ್ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಯಂತ್ರಕ್ಕೆ ವ್ಯಾಪಿಸಿದ್ದು, ಯಂತ್ರವು ಸಂಪೂರ್ಣವಾಗಿ ಹೊತ್ತಿ ಉರಿಯತೊಡಗಿದೆ.
ಯಂತ್ರಕ್ಕೆ ತಗುಲಿದ ಬೆಂಕಿ ಗಾಳಿಯ ವೇಗಕ್ಕೆ ಸುತ್ತಲಿನ ಕಬ್ಬಿನ ಗದ್ದೆಗಳಿಗೂ ವೇಗವಾಗಿ ಹರಡಿತು. ಘಟನೆಯಲ್ಲಿ ಸುಮಾರು 20 ಎಕರೆಯಷ್ಟು ವಿಸ್ತೀರ್ಣದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ದಹನವಾಗಿದೆ. ಬೆಂಕಿಯ ಕೆನ್ನಾಲಗೆಗೆ ರೈತರು ಆಘಾತಕ್ಕೊಳಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಣ್ಣೆದುರೇ ಬೂದಿಯಾಗಿದೆ




