ಬೆಂಗಳೂರು: ಸರ ಕಳವು ಮಾಡಿದ್ದನ್ನು ತಾಯಿಗೆ ಹೇಳಿದಕ್ಕೆ ಸ್ನೇಹಿತನನ್ನೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೃಷ್ಣಪ್ಪ ಲೇಔಟ್ ನಿವಾಸಿ ರಾಹಲ್ (20) ಹತ್ಯೆಯಾದವ. ಕೃತ್ಯ ಎಸಗಿದ ಪ್ರೀತಮ್ (19) ಎಂಬಾತನನ್ನು ಬಂಧಿಸಲಾಗಿದೆ.ಅ.26 ರಂದು ಸಂಜೆ ಕೃಷ್ಣಪ್ಪ ಲೇಔಟ್ ನ ಗಣಪತಿಪುರದಲ್ಲಿ ಘಟನೆ ನಡೆದಿದೆ.
ಆರೋಪಿ ಪ್ರೀತಮ್ ತಾಯಿ ಲೀಲಾ ಜತೆ ಕೃಷ್ಣಪ್ಪ ಲೇಔಟ್‌ನ ಗಣಪತಿಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಜಯನಗರ 2ನೇ ಹಂತದಲ್ಲಿರುವ ಕಂಪನಿಯೊಂದಲ್ಲಿ ಹೌಸ್ ಕಿಪಿಂಗ್ ಕೆಲಸಕ್ಕೆ ಹೋಗುತ್ತಿದ್ದ. ತಾಯಿ ಲೀಲಾ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಾರೆ.
ಈತನ ಮನೆ ಸಮೀಪದಲ್ಲೇ ಬಾಲ್ಯ ಸ್ನೇಹಿತ ರಾಹುಲ್ ವಾಸವಾಗಿದ್ದು, ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಈ ಮಧ್ಯೆ ಆರೋಪಿ ಪ್ರೀತಮ್ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗಾಗಿ ಹಣ ಹೊಂದಿಸುತ್ತಿದ್ದ. ಆದರೆ, ನಿರೀಕ್ಷೆಯಷ್ಟು ಹಣ ಹೊಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ತಾಯಿಯ ಮಾಂಗಲ್ಯ ಸರ ಕದ್ದಿದ್ದಾನೆ.
ಈ ಪೈಕಿ ತಾಳಿ ಚಿನ್ನದ್ದಾಗಿದ್ದು, ಸರ ರೋಲ್ಡ್ ಗೋಲ್ಡ್ ಆಗಿದೆ. ಆದರೆ, ಈ ವಿಚಾರ ತಿಳಿಯದ ಪ್ರೀತಮ್ ಸರ ಕಳವು ಮಾಡಿದ್ದ. ಸರ ಕಳ್ಳತನವಾಗಿರುವ ಬಗ್ಗೆ ತಾಯಿ ಲೀಲಾ, ಮಗ ಪ್ರೀತಮ್‌ನನ್ನು ಪ್ರಶ್ನಿಸಿದ್ದಾರೆ.
ಆಗ ಆರೋಪಿ, ಮನೆಗೆ ಬರುತ್ತಿದ್ದ ಸ್ನೇಹಿತ ರಾಹುಲ್ ಕಳವು ಮಾಡಿದ್ದಾನೆ ಎಂದು ತಾಯಿಗೆ ಹೇಳಿದ್ದ. ಅಲ್ಲದೆ, ಸ್ನೇಹಿತರ ಬಳಿಯೂ ರಾಹುಲ್, ತನ್ನ ತಾಯಿಯ ಸರ ಕಳವು ಮಾಡಿದ್ದಾನೆ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ಹೇಳಿದರು.




