ತುರುವೇಕೆರೆ: –ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ತಾಲೂಕಿನ ಕಲಾವಿದರುಗಳು ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ರಂಗದೃಶ್ಯಾವಳಿಗಳನ್ನು ಅಭಿನಯಿಸಿದರು.
ರಂಗದೃಶ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷ ಟಿ.ಎನ್. ಮಂಜುನಾಥ್ (ಅಮಾನಿಕೆರೆ) ವಹಿಸಿ ಮಾತನಾಡಿ, ರಂಗಭೂಮಿ, ನಾಟಕ ಕಲೆಗಳಿಗೆ ಸಾವಿರಾರು ವರ್ಷದ ಇತಿಹಾಸವಿದೆ. ಪೌರಾಣಿಕ ನಾಟಕಗಳು ದೇಶದ ಧಾರ್ಮಿಕತೆ, ಸಾಂಸ್ಕೃತಿಕತೆ, ಇತಿಹಾಸದ ಪ್ರತಿಬಂಬ ಹಾಗೂ ಪ್ರತೀಕವಾಗುವ ಜೊತಗೆ ಜನರಲ್ಲಿ ಸತ್ಯ, ಶ್ರದ್ದೆ, ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದವು ಎಂದರು.
ಇಂದು ತಂತ್ರಜ್ಞಾನ ಬೆಳೆದಂತೆ ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾಗಿ ರಂಗಕಲೆಗಳು ಮಂಕಾಗಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ, ನಾಟಕ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ನಡೆಯುತ್ತಲೇ ಇದೆ. ಹಿರಿಯ ಕಲಾವಿದರೊಡಗೂಡಿ ಯುವ ಪೀಳಿಗೆಯೂ ರಂಗಕಲೆಗಳ ಬಗ್ಗೆ ಆಸಕ್ತಿ ವಹಿಸುತ್ತಿರುವುದು ರಂಗಭೂಮಿಯ ಪ್ರಾವಿತ್ರತ್ಯತೆ ಮತ್ತು ಪ್ರಾಮುಖ್ಯತೆಯನ್ನು ಎತ್ತಿಹಿಡಿದಿದೆ ಎಂದರು.
ಪಪಂ ಅಧ್ಯಕ್ಷೆ ಆಶಾರಾಜಶೇಖರ್, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ರಂಗದೃಶ್ಯಾವಳಿಯಲ್ಲಿ ಕುರುಕ್ಷೇತ್ರದ ಶ್ರೀಕೃಷ್ಣ ಸಂಧಾನ, ರಾಜೋಧ್ಯಾನ, ಅಭಿಜ್ಞಾನ ಶಾಕುಂತಲೆ ನಾಟಕದ ದುಶ್ಯಂತ ಶಾಕುಂತಲೆಯರ ಸಮಾಗಮ, ಸಂಪೂರ್ಣ ರಾಮಾಯಣದ ಅಶೋಕವನ ದೃಶ್ಯಗಳನ್ನು ಕಲಾವಿದರು ಅಭಿನಯಿಸಿದರು.
ಪ್ರಮುಖವಾಗಿ ಶ್ರೀಕೃಷ್ಣ ಹಾಗೂ ಆಂಜನೇಯನಾಗಿ ರಾಘವೇಂದ್ರ, ರುಕ್ಮಿಣಿಯಾಗಿ ಬೆಂಗಳೂರಿನ ಸುಮಾ, ದುರ್ಯೋಧನನಾಗಿ ಕುಮಾರಸ್ವಾಮಿ, ಅರ್ಜುನನಾಗಿ ಲೋಕೇಶ್, ದುಶ್ಯಂತನಾಗಿ ಮಂಜಣ್ಣ, ರಾವಣನಾಗಿ ಕುಮಾರ್ ಪಾತ್ರವಹಿಸಿದ್ದರು.
ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಸಿಪಿಐ ಲೋಹಿತ್, ಪಿಎಸ್.ಐ ಸಂಗಮೇಶ್ ಮೇಟಿ, ವಕೀಲ ಕೆ.ನಾಗೇಶ್, ಮಾರುತಿ ಕೃಪಾಪೋಷಿತ ನಾಟಕ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್ಟ