ಬೆಳಗಾವಿ: ಪಾಪಿ ಪತಿಯೋರ್ವ ತವರು ಮನೆಯಿಂದ ವರದಕ್ಷಿಣೆ ತರದ ಹೆಂಡತಿಯನ್ನು ಕೊಂದು ಬೆಡ್ ಕೆಳಗೆ ಹೆಣ ಅಡಗಿಸಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಪತ್ನಿ ಸಾಕ್ಷಿ ಆಕಾಶ್ ಕಂಬಾರ(20) ರನ್ನು ಪತಿ ಆಕಾಶ್ ಕಂಬಾರ್ ಕೊಲೆ ಮಾಡಿ, ಶವವನ್ನು ಬೆಡ್ ಕೆಳಗೆ ಹೆಣ ಅಡಗಿಸಿಟ್ಟು, ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಕೇವಲ 4 ತಿಂಗಳ ಹಿಂದಷ್ಟೇ ಆಕಾಶ್ ಕಂಬಾರ ಜೊತೆ ಸಾಕ್ಷಿಗೆ ಮದುವೆಯಾಗಿತ್ತು. ಆದರೆ, ಪದೇ ಪದೇ ವರದಕ್ಷಿಣೆ ತರುವಂತೆ ಆಕಾಶ್ ಕಂಬಾರ ಪೀಡಿಸುತ್ತಿದ್ದ. ಆದರೆ, ಮೂರು ದಿನಗಳ ಹಿಂದೆ ಜೋರು ಜಗಳ ನಡೆದು, ಸಾಕ್ಷಿಯನ್ನು ಆಕಾಶ್ ಕಂಬಾರ ಕೊಲೆ ಮಾಡಿದ್ದಾನೆ. ಆದರೆ, ಶವವನ್ನು ಏನು ಮಾಡಬೇಕು ಅಂತ ತೋಚದೇ ಬೆಡ್ ಕೆಳಗೆ ಅಡಗಿಸಿಟ್ಟಿದ್ದಾನೆ.
ಸಾಕ್ಷಿ ಕೊಲೆ ನಡೆದು ಮೂರು ದಿನಗಳು ಕಳೆದಿವೆ. ಆದರೆ, ಆಕಾಶ್ ಕಂಬಾರ್ನ ತಾಯಿ ಮುಂಬೈನಿಂದ ವಾಪಸ್ ಬಂದಾಗ ಮನೆಯಲ್ಲಿ ಕಮಟು ವಾಸನೆ ಬಂದಿದೆ.
ಎಲ್ಲಿಂದ ವಾಸನೆ ಬರುತ್ತಿದೆ ಅಂತ ಗಮನಿಸಿದಾಗ ಬೆಡ್ ಕೆಳಗೆ ಸೊಸೆಯ ಶವ ಇತ್ತು. ಇನ್ನೊಂದೆಡೆ ಮಗನೂ ಮನೆಯಲ್ಲಿ ಇರಲಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ಪೊಲೀಸರ ಹಾಗೂ ಗೋಕಾಕ ಡಿವೈಎಸ್ಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಭೇಟಿ ನೀಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆರೋಪಿ ಆಕಾಶ್ ಕಂಬಾರ್ ಇನ್ನೂ ಸಿಕ್ಕಿಲ್ಲ. ಆದ್ದರಿಂದ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಸಾಕ್ಷಿ ಕುಟುಂಬಸ್ಥರು ತಹಶೀಲ್ದಾರ್ ಮುಂದೆ ವರದಕ್ಷಿಣೆ ಆರೋಪ ಮಾಡಿದ್ದಾರೆ.




