ಲಕ್ನೋ: ಸಾಮಾನ್ಯವಾಗಿ ದಾಂಪತ್ಯ ಜೀವನದಲ್ಲಿ ವಿಚ್ಛೇದನ (Divorce) ಸಂಭವಿಸಿದರೆ ಅದು ದುಃಖದ ಸಂಗತಿ ಎಂದು ಪರಿಗಣಿಸಲಾಗುತ್ತದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಕೆಲವರು ‘ಡಿವೋರ್ಸ್ ಪಾರ್ಟಿ’ ನೀಡಿ ಸಂಭ್ರಮಿಸುವುದನ್ನೂ ನಾವು ನೋಡಿದ್ದೇವೆ.
ಅದರಂತೆ ಉತ್ತರ ಪ್ರದೇಶದ (Uttara Pradesh) ಬಸ್ತಿ ಜಿಲ್ಲೆಯ 25 ವರ್ಷದ ಯುವಕನೋರ್ವ ತನಗೆ ಪತ್ನಿಯಿಂದ ಕೋರ್ಟಿನಲ್ಲಿ ವಿಚ್ಛೇದನ ಸಿಕ್ಕಿದ್ದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಲು ಬರೋಬ್ಬರಿ 9 ಕಿಲೋಮೀಟರ್‌ಗಳಷ್ಟು ದೂರ ದೀಡ ನಮಸ್ಕಾರ ಹಾಕುವ ಮೂಲಕ ವಿಶಿಷ್ಟವಾಗಿ ಹರಕೆ ತೀರಿಸಿದ್ದಾನೆ.ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದ ಜೋಗೇಶ್ ಎಂಬ ಯುವಕ ಈ ವಿಚಿತ್ರ ಸಾಹಸ ಮಾಡಿದವರು. ನವರಾತ್ರಿಯ ಶುಭ ಸಂದರ್ಭದಲ್ಲಿ ಅವರು ತಮ್ಮ ಗ್ರಾಮದಿಂದ ಸ್ಥಳೀಯ ‘ಬೈದಾ ಸಮಯ ಮಾತಾ’ ದೇವಸ್ಥಾನದವರೆಗೆ ನೆಲದ ಮೇಲೆ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಸಾಗಿದ್ದಾರೆ.
ಬೆಳಿಗ್ಗೆ ಆರಂಭವಾದ ಈ ಕಠಿಣ ಯಾತ್ರೆಯು ಸುಮಾರು 12 ಗಂಟೆಗಳ ಕಾಲ ನಡೆದಿದ್ದು, ಇಡೀ ಹಾದಿಯುದ್ದಕ್ಕೂ ಜೋಗೇಶ್ ಅವರು ಉಪವಾಸವಿದ್ದು ‘ಜೈ ಶ್ರೀರಾಮ್’ ಮತ್ತು ‘ಜೈ ಬಜರಂಗಬಲಿ’ ಎಂದು ಘೋಷಣೆ ಕೂಗುತ್ತಾ ದೇವಸ್ಥಾನ ತಲುಪಿದ್ದಾರೆ.




