ತುಮಕೂರು: ಮೂರು ವರ್ಷದ ಮಗುವನ್ನು ಕೊಲೆ ಮಾಡಿ, ಹಾವು ಕಚ್ಚಿ ಸಾವನ್ನಪ್ಪಿದೆ ಎಂದು ನಾಟಕವಾಡಿದ್ದ ಚಂದ್ರಶೇಖರ್ ಎಂಬಾತನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಿಥುನ್‌ಗೌಡ (3) ಕೊಲೆಯಾದ ಮಗು. ಚಾಮರಾಜನಗರ ಮೂಲದ ಚಂದ್ರಶೇಖರ್ ಮತ್ತು ಕಾವ್ಯಾ ತಾಲ್ಲೂಕಿನ ಉರ್ಡಿಗೆರೆ ಹೋಬಳಿಯ ಸಿದ್ಧಲಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ದರು.
ಕಾವ್ಯಾಗೆ ಈಗಾಗಲೇ ಮದುವೆಯಾಗಿ ಮಿಥುನ್‌ಗೌಡ ಎಂಬ ಮಗ ಇದ್ದ. ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಗಂಡನನ್ನು ತೊರೆದಿದ್ದರು. ಕಳೆದ ಕೆಲ ವರ್ಷದಿಂದ ಕಾವ್ಯಾ ತನ್ನ ಮಗನೊಂದಿಗೆ ಚಂದ್ರಶೇಖರ್ ಜತೆಗೆ ವಾಸವಿದ್ದರು.
ಚಂದ್ರಶೇಖರ್ ಕ್ರಶರ್‌ನಲ್ಲಿ, ಕಾವ್ಯಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಮಗನ ವಿಚಾರಕ್ಕೆ ಆಗಾಗ ಗಲಾಟೆಯಾಗುತ್ತಿತ್ತು. ಮಾರ್ಚ್ 20ರಂದು ಕಾವ್ಯಾ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಮಗು ಮೇಲೆ ಚಂದ್ರಶೇಖರ್ ಹಲ್ಲೆ ಮಾಡಿದ್ದು, ಪ್ರಜ್ಞೆ ತಪ್ಪಿತ್ತು.
ಅಕ್ಕಪಕ್ಕದ ಮನೆಯವರಿಗೆ ಮಗುವಿಗೆ ಹಾವು ಕಚ್ಚಿದೆ ಎಂದು ಹೇಳಿದ್ದ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿ ಮಗು ಸಾವನ್ನಪ್ಪಿದ ಬಗ್ಗೆ ಖಚಿತ ಪಡಿಸಿದ್ದರು. ನಂತರ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಅಂತ್ಯಕ್ರಿಯೆಗೂ ಮುನ್ನ ಸಿದ್ಧಲಿಂಗಯ್ಯನಪಾಳ್ಯದ ಎಸ್.ಆರ್.ಗಂಗಾಧರಯ್ಯ ಎಂಬುವರು ಮಿಥುನ್ ಫೋಟೊ ತೆಗೆದುಕೊಂಡಿದ್ದರು. ಮಾರ್ಚ್ 22ರಂದು ಮತ್ತೊಮ್ಮೆ ಫೋಟೊ ನೋಡಿದಾಗ ಸಾವಿನ ಬಗ್ಗೆ ಅನುಮಾನ ಮೂಡಿದೆ. ಈ ಕುರಿತು ಗ್ರಾಮಸ್ಥರು ಸೇರಿ ಚಂದ್ರಶೇಖರ್‌ರನ್ನು ವಿಚಾರಿಸಿದಾಗ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾರೆ.
ಗಂಗಾಧರಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶವವನ್ನು ಹೊರತೆಗೆದು, ತಹಶೀಲ್ದಾರ್ ರಾಜೇಶ್ವರಿ ಪಿ.ಎಸ್ ಮತ್ತು ಇನ್ಸ್‌ಪೆಕ್ಟರ್ ವಿಜಯಲಕ್ಷ್ಮಿ ಅವರ ಮೇಲ್ವಿಚಾರಣೆಯಲ್ಲಿ ಶವಪರೀಕ್ಷೆ ನಡೆಸಲಾಗಿದೆ.