ಬಳ್ಳಾರಿ : ಜಿಲ್ಲೆಯ 400ಕ್ಕೂ ಹೆಚ್ಚು ಕರಡಿಗಳು ಸೇರಿದಂತೆ ವಿವಿಧ ಅಪರೂಪದ ವನ್ಯ ಜೀವಿಗಳ ಹಾಗೂ ಪಕ್ಷಿಗಳ ವಾಸಸ್ಥಾನಗಳಲ್ಲಿ ದರೋಜಿ ಗುಡ್ಡವೂ ಒಂದಾಗಿದೆ. ಇಂತಹ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ಧಗಧಗಿಸಿ ಹೊತ್ತಿ ಉರಿಯುತ್ತಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದರೋಜಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗಿಸಿ ಹೊತ್ತಿ ಉರಿಯುತ್ತಿದೆ. ಭಾನುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಈಗ ಇಡೀ ಗುಡ್ಡಕ್ಕೆ ಆವರಿಸಿರುವುದಾಗಿ ತಿಳಿದು ಬಂದಿದೆ.
ದರೋಜಿ ಗುಡ್ಡದಲ್ಲಿ 400ಕ್ಕೂ ಹೆಚ್ಚು ಕರಡಿಗಳು ಸೇರಿದಂತೆ ವಿವಿಧ ವನ್ಯಜೀವಿಗಳು, ಪಕ್ಷಿಗಳು ವಾಸಿಸುತ್ತಿದ್ದು, ಈಗ ಬೆಂಕಿಯ ಕೆನ್ನಾಲಿಗೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿವೆ ಎನ್ನಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ.
ಸದ್ಯ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ವನ್ಯಜೀವಿಗಳ ಪ್ರಾಣಹಾನಿಯಾಗಿಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.