ಲಕ್ನೋ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಅತ್ತಿಗೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು ತನ್ನ ಪೋಷಕರ ಬಳಿ ಈ ವಿಚಾರ ತಿಳಿಸಿ, ಮದುವೆ ಮಾಡಿಸುವಂತೆ ಕೇಳಿಕೊಂಡಾಗ ಅವರು ವಿಷ ನೀಡಿ ಕೊಲೆಗೆ ಪ್ರಯತ್ನಿಸಿರುವಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದೆ.
ವರದಿಗಳ ಪ್ರಕಾರ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ವಿವಾಹಿತ ಅತ್ತಿಗೆ ಕಳೆದ 6 ತಿಂಗಳುಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬಳು ಕೂಡಾ ಪರಸ್ಪರ ಆತ್ಮೀಯವಾಗಿದ್ದವು.
ಆದರೆ ಇಬ್ಬರ ಪ್ರಣಯ ಸಂಬಂಧ ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಯಿತು. ಇಬ್ಬರ ಸಂಬಂಧಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಐದು ದಿನಗಳ ಹಿಂದೆ ಇಬ್ಬರೂ ತಮ್ಮ ಮನೆಗಳಿಂದ ಓಡಿ ಹೋಗಿದ್ದರು.
ಬಳಿಕ ವಿವಾಹಿತ ಮಹಿಳೆ ಹಾಗೂ ಅಪ್ರಾಪ್ತೆಯನ್ನು ಪತ್ತೆ ಹಚ್ಚಿದ ಪೊಲೀಸರು, ಇಬ್ಬರನ್ನೂ ತಮ್ಮ ಕುಟುಂಬಗಳಿಗೆ ಒಪ್ಪಿಸಿದ್ದಾರೆ. ವಿವಾಹಿತ ಮಹಿಳೆ ತನ್ನ ಪತಿಯಿಂದ ದೂರವಾಗಿದ್ದರಿಂದ ಆಕೆ ಅಪ್ರಾಪ್ತೆಯೊಂದಿಗೆ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದಾಳೆ. ಆದರೆ ಕುಟುಂಬಸ್ಥರು ಆಕೆಗೆ ಥಳಿಸಿ, ವಿಷ ನೀಡಿ ಕೊಲೆಯ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ವಿಷ ಸೇವಿಸಿದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಎರಡೂ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಈ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.