Ad imageAd image

ರಸ್ತೆ ಅಪಘಾತ ತಡೆಯಲು ಕರ್ನಾಟಕದಲ್ಲಿ ಹೊಸ ಯೋಜನೆ : ದೇಶದಲ್ಲೇ ಮೊದಲು

Bharath Vaibhav
ರಸ್ತೆ ಅಪಘಾತ ತಡೆಯಲು ಕರ್ನಾಟಕದಲ್ಲಿ ಹೊಸ ಯೋಜನೆ : ದೇಶದಲ್ಲೇ ಮೊದಲು
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದ ಸಾರಿಗೆ ಇಲಾಖೆ ದೇಶದಲ್ಲೇ ಮೊದಲು ಎನ್ನಬಹುದಾದ ವಿನೂತನ ಯೋಜನೆಯೊಂದನ್ನು ಜಾರಿ ಮಾಡಲು ಮುಂದಾಗಿದೆ.

ಎರಡು ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಖಾಸಗಿ ಬಸ್ ಕಂಟೇನರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಪ್ರಯಾಣಿಕರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.

ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಮುಂದಾಗಿದೆ. ಇದರ ಪ್ರಕಾರ ಇನ್ನು ಮುಂದೆ ಬಸ್ ಗಳಲ್ಲಿ ರಾತ್ರಿ ವೇಳೆ ಚಾಲನೆ ಮಾಡುವ ಚಾಲಕರು ಕಡ್ಡಾಯವಾಗಿ ಕನಿಷ್ಠ ಪಕ್ಷ ಎರಡು ಗಂಟೆ ವಿಶ್ರಾಂತಿ ತೆಗೆದುಕೊಳ್ಳುವ ನಿಯಮವನ್ನು ಜಾರಿಗೆ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು, ಗಡ್ಕರಿ ಅವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಒಂದು ವೇಳೆ ಚಾಲಕರಿಗೆ ವಿಶ್ರಾಂತಿ ತೆಗೆದುಕೊಳ್ಳುವ ನಿಯಮ ಜಾರಿಗೆ ಬಂದರೆ ದೇಶದಲ್ಲೇ ಇದನ್ನು ಅನುಷ್ಠಾನ ಮಾಡಿದ ಮೊಟ್ಟಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಅಪಘಾತಗಳನ್ನು ಕೇವಲ ದಂಡ-ಶಿಸ್ತು ಕ್ರಮಗಳಿಂದ ತಡೆಯಲು ಸಾಧ್ಯವಿಲ್ಲ ಎಂಬ ನಿಲುವಿನೊಂದಿಗೆ, ಮೂಲಭೂತ ಬದಲಾವಣೆ ಅಗತ್ಯವೆಂಬುದು ಸಚಿವರ ವಾದವಾಗಿದೆ.

ಸಚಿವರ ಪ್ರಸ್ತಾವನೆಯ ಪ್ರಕಾರ, ರಾತ್ರಿ 12 ರಿಂದ ಬೆಳಗ್ಗೆ 4 ಗಂಟೆಯೊಳಗೆ ಕನಿಷ್ಠ 2 ಗಂಟೆಗಳ ಕಡ್ಡಾಯ ವಿಶ್ರಾಂತಿ ಬಸ್ ಚಾಲಕರಿಗೆ ನೀಡಬೇಕು. ಈ ವಿಶ್ರಾಂತಿ ಕೇವಲ ಕಾಗದದ ಮೇಲೆ ಸೀಮಿತವಾಗದೆ, ಜಿಪಿಎಸ್ ತಂತ್ರಜ್ಞಾನ ಆಧಾರಿತವಾಗಿ ದೃಢಪಡಿಸುವ ಅಧಿಕಾರವನ್ನು ಸಾರಿಗೆ ಇಲಾಖೆಗೆ ನೀಡಬೇಕು ಎಂಬುದು ಅವರ ಪ್ರಮುಖ ಒತ್ತಾಯವಾಗಿದೆ. ಇದರಿಂದ ಚಾಲಕರು ನಿಜವಾಗಿಯೂ ವಿಶ್ರಾಂತಿ ಪಡೆದಿದ್ದಾರಾ ಎಂಬುದನ್ನು ಮೇಲ್ವಿಚಾರಣೆ ಮಾಡಬಹುದು.

ಅಲರ್ಟ್ ವ್ಯವಸ್ಥೆ: ಇದಷ್ಟೇ ಅಲ್ಲದೆ, ತಂತ್ರಜ್ಞಾನ ಬಳಸಿ ಅಪಘಾತ ತಡೆಯುವ ದಿಕ್ಕಿನಲ್ಲೂ ಸರ್ಕಾರ ಚಿಂತನೆ ನಡೆಸಿದೆ. ಅದರಲ್ಲೊಂದು ಮಹತ್ವದ ಯೋಜನೆ ಎಂದರೆ ‘ಡ್ರೈವರ್ ಡ್ರೌಸಿನೆಸ್ ಡಿಟೆಕ್ಟ್ ಸಿಸ್ಟಮ್’ ಅಥವಾ ಅರೆನಿದ್ರೆ ಅಲರ್ಟ್ ವ್ಯವಸ್ಥೆ.

ಈ ವ್ಯವಸ್ಥೆ ಚಾಲಕರ ಕಣ್ಣು ಚಲನೆ, ತಲೆ ತೂಗು, ಪ್ರತಿಕ್ರಿಯೆ ವಿಳಂಬದಂತಹ ಲಕ್ಷಣ ಗಮನಿಸಿ, ಚಾಲಕ ಅರೆನಿದ್ರೆಗೆ ಜಾರಿದ ಕ್ಷಣದಲ್ಲೇ ಜೋರಾದ ಅಲರಾಂ ಮೂಲಕ ಎಚ್ಚರ ನೀಡುತ್ತದೆ. ಇದರಿಂದ ಅಪಾಯದ ಕ್ಷಣದಲ್ಲಿ ಚಾಲಕ ಎಚ್ಚೆತ್ತು ವಾಹನ ನಿಯಂತ್ರಣಕ್ಕೆ ಅವಕಾಶ ಸಿಗುತ್ತದೆ.

ಪ್ರಯಾಣಿಕರ ಜೀವ ಸುರಕ್ಷತೆ ಹಾಗೂ ಚಾಲಕರನ್ನೇ ತಪ್ಪಿತಸ್ಥರನ್ನಾಗಿ ಮಾಡುವ ಬದಲು, ಅವರಿಗೆ ಮಾನವೀಯ ಕೆಲಸದ ಪರಿಸರ, ಸಮರ್ಪಕ ವಿಶ್ರಾಂತಿ ಮತ್ತು ತಂತ್ರಜ್ಞಾನ ಬೆಂಬಲ ನೀಡಿದರೆ ಮಾತ್ರ ಅಪಘಾತಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ ಎಂಬುದು ಸಾರಿಗೆ ಇಲಾಖೆಯ ನಿಲುವಾಗಿದೆ.

ನಿತಿನ್ ಗಡ್ಕರಿ ಅವರ ನೇತೃತ್ವದ ರಸ್ತೆ ಸಾರಿಗೆ ಇಲಾಖೆ ಈ ಪ್ರಸ್ತಾವನೆಗಳಿಗೆ ಸ್ಪಂದಿಸಿದರೆ, ದೇಶದಾದ್ಯಂತ ರಸ್ತೆ ಸುರಕ್ಷತೆಯಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಇದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಬಳಿ ನಡೆದ ಇತ್ತೀಚಿನ ಬಸ್ ಅವಘಡ ರಾಜ್ಯಾದ್ಯಂತ ಆತಂಕ ಹುಟ್ಟಿಸಿದೆ.

ಇದು ಒಬ್ಬರ ತಪ್ಪಿನಿಂದ ನಡೆದ ಘಟನೆ ಅಲ್ಲ, ಬದಲಾಗಿ ಸಾರಿಗೆ ವ್ಯವಸ್ಥೆಯೊಳಗಿನ ಗಂಭೀರ ಲೋಪ ದೋಷಗಳನ್ನು ಮತ್ತೆ ಬೆಳಕಿಗೆ ತಂದಿದೆ. ಸಾಲು ಸಾಲಾಗಿ ಸಂಭವಿಸುತ್ತಿರುವ ಬಸ್ ದುರಂತಗಳ ಬೆನ್ನಲ್ಲೇ ಚಾಲಕರು ಅತಿಯಾದ ಒತ್ತಡವೂ ಕಾರಣ ಎನ್ನಲಾಗಿದೆ.

ಸಾಮಾನ್ಯವಾಗಿ ಅಪಘಾತ ಸಂಭವಿಸಿದ ತಕ್ಷಣ ಚಾಲಕರ ಅಜಾಗರೂಕತೆಯನ್ನೇ ಹೊಣೆ ಮಾಡುವ ಪ್ರವೃತ್ತಿ ಇದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಅಷ್ಟೇ ಸರಳವಲ್ಲ. ದೀರ್ಘ ಸಮಯದ ಚಾಲನೆ, ರಾತ್ರಿ ಪ್ರಯಾಣ, ಸಮರ್ಪಕ ವಿಶ್ರಾಂತಿಯ ಕೊರತೆ, ಸಮಯಕ್ಕೆ ತಲುಪಬೇಕೆಂಬ ಒತ್ತಡ, ಇವೆಲ್ಲವೂ ಚಾಲಕರ ಮೇಲೆ ಭಾರೀ ಮಾನಸಿಕ ಮತ್ತು ದೈಹಿಕ ಒತ್ತಡ ಉಂಟುಮಾಡುತ್ತವೆ.

ಇದರ ಪರಿಣಾಮವಾಗಿ ಅರೆನಿದ್ರೆ, ಗಮನಭಂಗ, ಪ್ರತಿಕ್ರಿಯೆಯ ವೇಗ ಕುಸಿತ ಕಂಡುಬಂದು ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನು ತಡೆಗಟ್ಟಬೇಕು ಎಂಬ ಕೂಗು ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

ಬ್ಲ್ಯಾಕ್ ಸ್ಪಾಟ್‍ಗಳ ಮೇಲೆ ನಿಗಾ: ಹಿರಿಯೂರಿನಲ್ಲಿ ಅಪಘಾತ ನಡೆದ ಸ್ಥಳವು ‘ಬ್ಲ್ಯಾಕ್ ಸ್ಪಾಟ್’ ಆಗಿ ಪರಿಣಮಿಸಿದ್ದು, ಅಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ರಸ್ತೆಯ ವಿನ್ಯಾಸದಲ್ಲಿ ಏನಾದರೂ ದೋಷವಿದೆಯೇ ಅಥವಾ ಸುರಕ್ಷತಾ ಕ್ರಮಗಳ ಕೊರತೆಯಿದೆಯೇ ಎಂಬುದನ್ನು ಪರಿಶೀಲಿಸಲು ಸಚಿವರು ಸೂಚಿಸಿದ್ದಾರೆ.

ರಾತ್ರಿ ಪ್ರಯಾಣ ಮಾಡುವವರು ಸಂಜೆಯೇ ಸರಿಯಾಗಿ ನಿದ್ರೆ ಮಾಡಿ ನಂತರ ಪ್ರಯಾಣ ಆರಂಭಿಸುವುದು ಉತ್ತಮ. ಒಂದು ವೇಳೆ ಚಾಲನೆ ಮಾಡುವಾಗ ನಿದ್ದೆ ಬಂದರೆ, ವಾಹನವನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ ಮುಖ ತೊಳೆದು ಅಥವಾ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮುಂದೆ ಸಾಗಬೇಕು ಎಂದು ಸಚಿವ ರಾಮಲಿಂಗರೆಡ್ಡಿ ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!