‘ಡಾಕ್ಟರ್’ ಎನ್ನಿಸಿಕೊಳ್ಳಬೇಕೆಂಬ ಹಂಬಲ ಇದ್ದವರಿಗೆ ಇದುಸುಗ್ಗಿಕಾಲ. ಓದಿದ್ದೀರೋ ಇಲ್ಲವೋ, ಸಜ್ಜನರೋ ದುರ್ಜನರೋ,ಪಾತಕಿಗಳೋ ಪಾಪದ ಜೀವಗಳೋ ಏನೇ ಆಗಿದ್ದರೂ ದುಡ್ಡುಕೊಟ್ಟರೆ ಯಾರಾದರೂ ಕೆಲಸಕ್ಕೆ ಬಾರದೇ ಇರುವ ಸ್ಟಡಿ ಸೆಂಟರ್ ನವರು ಹಣ ಪಡೆದು ಗೌರವ ಡಾಕ್ಟರೇಟ್ ಪದವಿ ನೀಡುತ್ತಿದ್ದಾರೆ.
ಗೌರವ ಡಾಕ್ಟರೇಟ್ ಪದವಿಯ ವ್ಯಾಪಾರದ ಅಂಗಡಿಯಲ್ಲಿ ಪದವಿ ಖರೀದಿಸಲು ತಾಲ್ಲೂಕಿನ ಜನರಲ್ಲಿ ಸ್ಫರ್ಧೆ ನಡೆದಿದೆ. ಈ ಪದವಿ ವ್ಯಾಪಾರ ಮಾಡಲು ತಾಲ್ಲೂಕಿನಲ್ಲಿ ಏಜೆಂಟರು ಇದ್ದಾರೆ.
ಹೆಸರಿನ ಮುಂದೆ ಪದವಿಗಳ ಸರಪಳಿಯನ್ನು ಪೋಣಿಸಿಕೊಳ್ಳುವ ಹಪಹಪಿಯಂತೆಯೇ ಹೆಸರಿನ ಹಿಂದೆ ‘ಡಾ. ಎಂದು ಹಾಕಿಕೊಳ್ಳುವ ಖಯಾಲಿ ಹೆಚ್ಚಾಗಿದೆ. ಇದರಿಂದಲೇ ಡಾಕ್ಟರ್ ಮತ್ತು ಗೌರವಡಾಕ್ಟರ್ ವ್ಯಾಪಾರದ ಅಂಗಡಿಗಳು ಜಗತ್ತಿನಗಲ ವ್ಯಾಪಿಸಿವೆ.
ಅನೇಕ ವಿದೇಶಿ ವಿಶ್ವವಿದ್ಯಾಲಯ ಗಳು ಕೂಡ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿಯೂ ತಮ್ಮ ವ್ಯಾಪಾರದ ಏಜೆಂಟರನ್ನು ನೇಮಿಸಿಕೊಂಡಿವೆ.
ಸಾಮಾನ್ಯವಾಗಿ ವೈದ್ಯರು ತಮ್ಮ ಎಂಬಿಬಿಎಸ್ ಪದವಿ ನಂತರ ವಿದೇಶದಲ್ಲಿ ಯಾವುದಾದರೂ ಪಿಜಿ ಡಿಪ್ಲೊಮಾ ಮಾಡಿದ್ದರೆ ಅದರ ಜೊತೆ ಆ ದೇಶದ ಹೆಸರನ್ನೂ ಕಂಸದಲ್ಲಿ ಹಾಕಿಕೊಳ್ಳುತ್ತಿದ್ದರು. ಅದರಂತೆಯೇ ಸಾಹಿತಿಯೊಬ್ಬರು ಇಂಗ್ಲಿಷ್ಎಂಎ (ಲಂಡನ್) ಎಂದು ಕಾರ್ಡ್ ಮಾಡಿಸಿದ್ದರು.
ಬಿಎ, ಎಂಎಎಂದು ವಿಜಿಟಿಂಗ್ ಕಾರ್ಡ್ ಮಾಡಿಸಿದ ಉಪನ್ಯಾಸಕರೂ ಇದ್ದಾರೆ. ಹೀಗೆ ವಿವಿಧ ಪದವಿಗಳನ್ನು ನಾಮದ ಮುಂದೆ ಹಾಕಿಸಿ ತಮ್ಮ ಓದಿನ ಸಾಧನೆಯನ್ನು ತೋರಿಸಲಾಗುತ್ತದೆ.
ಶರಣರು ಸಾರಿದ ‘ಕಾಯಕವೇ ಕೈಲಾಸ’ ಎಂಬ ಮಾತಿನ ಹಿನ್ನೆಲೆಯಲ್ಲೇ ನೋಡಿದರೆ ಒಬ್ಬ ವಿದ್ಯಾರ್ಥಿ ತನ್ನ ಶೈಕ್ಷಣಿಕ ಅವಧಿಯಲ್ಲಿ ಓದುವುದು ಆತನ ಕೆಲಸ. ಅದರ ಪ್ರತಿಫಲವಾಗಿ ಯಾವುದೋ ಒಂದು ಪದವಿಯನ್ನು ನೀಡುತ್ತಾರೆ. ಅದರಲ್ಲಿ ಯಾವ ಹೆಚ್ಚುಗಾರಿಕೆ ಇದೆ ಎಂದು ತಮ್ಮ ಹೆಸರಿನೋತ್ತರವಾಗಿ ಪದವಿಯನ್ನು ಪೋಣಿಸಿಕೊಳ್ಳಬೇಕು. ಓದುವುದು ಒಬ್ಬ ವಿದ್ಯಾರ್ಥಿ ಕೆಲಸವಾದರೆ, ದುಡಿಯುವ ಜನರ ಶ್ರಮವೂ ಕೆಲಸವೇ. ಹಾಗೆಂದ ಮೇಲೆ ಅವರಿಗೆ ತಮ್ಮ ಹೆಸರಿನ ಮುಂದೆ ಪದವಿ ಪೋಣಿಸಿಕೊಳ್ಳುವ ಭಾಗ್ಯ ಏಕಿಲ್ಲ? ಕಾಯಕವೇ ಕೈಲಾಸ ಅಂದಮೇಲೆ ಒಬ್ಬ ಹಮಾಲ, ರೈತ, ಗೇಣಿದಾರ, ಕೂಲಿ- ಕಾರ್ಮಿಕ,ಮಾಲಿ, ಚಮ್ಮಾರ, ಜಾಡಮಾಲಿ… ಸೇರಿದಂತೆ ಹಲವಾರು ವೃತ್ತಿಕೌಶಲ್ಯ ಪರಿಣತರು ತಮ್ಮ ಹೆಸರಿನ ಮುಂದೆ ಯಾವ ಕ್ವಾಲಿಫೀಕೇಷನ್ ವಿಶೇಷಣಗಳನ್ನು ಹಾಕಿಕೊಳ್ಳಬೇಕು.
ಸಾಮಾನ್ಯವಾಗಿ ಗೌರವ ಡಾಕ್ಟರ್ ಕಲೆ, ಸಾಹಿತ್ಯ, ಕೃಷಿ, ಸಮಾಜಸೇವೆ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ವಿಶ್ವವಿದ್ಯಾಲಯಗಳು ಗುರುತಿಸಿ ಗೌರವಿಸುವ ಸಂಬಂಧ ನೀಡುತ್ತಿದ್ದವು. ಪ್ರದೇಶವಾರು, ವಿಷಯವಾರು ವಿಶ್ವವಿದ್ಯಾಲಯ ಗಳು ಹೆಚ್ಚಾದಂತೆ ಡಾಕ್ಟ್ರೇಟ್ ನೀಡುವ ಕೇಂದ್ರಗಳೂ ಹೆಚ್ಚಾದವು.
ವಿವಿಗಳ ಸಂಪ್ರದಾಯದ ಅನುಸಾರ ಅರ್ಹ ಅನೇಕ ಸಾಮಾಜಿಕ ಕಾರ್ಯಕರ್ತರು,ಉದ್ಯಮಿಗಳು,
ರಾಜಕಾರಣಿಗಳು, ಸಂಘಟಕರು, ಪತ್ರಕರ್ತರು, ಸಾಹಿತಿಗಳು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಕೆಲವರು ಅದಕ್ಕಾಗಿ ವಿಶ್ವವಿದ್ಯಾಲಯಗಳ ಸಿಡಿಕೇಟ್ ಸದಸ್ಯರು ಕುಲಸಚಿವರು- ಉಪಕುಲಪತಿಗಳು ಸೇರಿದಂತೆ ಸಚಿವರಿಂದ ಶಿಫಾರಸ್ಸು ಮಾಡಿಸಿ ಪದವಿ ಪಡೆಯುವ ಚಾಳಿಯೂ ಬೆಳೆಯಿತು. ಇಂತಹ ಪೈಪೋಟಿಯ ಬೇಡಿಕೆಯನ್ನು ಮನಗಂಡು ದೇಶ- ವಿದೇಶಗಳ ವಿವಿಗಳು ತಮ್ಮ ಡಾಕ್ಟರೇಟ್ ಅಂಗಡಿಯನ್ನು ತೆರೆದು ಕೊಂಡಿವೆ.ಗೌರವ ಡಾಕ್ಟರೇಟ್ ಅಷ್ಟಕ್ಕೆ ನಿಲ್ಲುವುದಿಲ್ಲ.ಅದಕ್ಕೊಂದು ಅಭಿನಂದನಾ ಸಮಾರಂಭ ಇರುತ್ತದೆ. ಗೌರವಕ್ಕೆಪಾತ್ರರಾದವರ ಅಭಿಮಾನಿ ಬಳಗ ಹೆಸರನಲ್ಲಿ ಅಭಿನಂದನಾ ಕಾರ್ಯಕ್ರಮವೂ ನಡೆಯುತ್ತದೆ. ಅದಕ್ಕೊಂದಿಷ್ಟು ಪ್ರಚಾರ ಮಾಡಿ ಆಹ್ವಾನಿತರಿಗೆಲ್ಲ ಚಿಕ್ಕ ಔತಣ ನೀಡಿ ಸಂತಸಗೊಳಿಸಿ ಒಂದಿಷ್ಟು ಜನರಿಂದ ಹೊಗಳಿಸಿ ಕೊಳ್ಳುವ ಮಟ್ಟಕ್ಕೂ ಮುಂದುವರಿದಿದೆ.