ಬಾಗಲಕೋಟೆ : ಗಾಣಿಗ ಸಮುದಾಯದ ಯುವತಿ ಹಾಗೂ ಮರಾಠ ಸಮುದಾಯಕ್ಕೆ ಸೇರಿದ ಯುವಕ ಇಬ್ಬರೂ ಪರಸ್ಪರ ಪ್ರೀತಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳುವ ವೇಳೆಯೇ ಕಚೇರಿ ನುಗ್ಗಿದ ಯುವತಿಯ ಮನೆಯವರು, ತಮ್ಮ ಮಗಳನ್ನೇ ರಕ್ತಬರುವಂತೆ ಥಳಿಸಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ.
ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯ ಕಡೆಯವರು ಅಧಿಕಾರಿಗಳು ಹಾಗೂ ನೂರಾರು ಜನರ ಎದುರೇ ರಾಕ್ಷಸರಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಸದ್ಯ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯ ಪ್ರೇಮಕ್ಕೆ ಯುವತಿಯ ಪೋಷಕರು ವಿರೋಧಿಸಿದ್ದಾರೆ. ಈ ವಿರೋಧವನ್ನು ಮೆಟ್ಟಿನಿಂತ ಪ್ರೇಮಿಗಳು ಜಮಖಂಡಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಇಂದು ಬಂದಿದ್ದರು.
ಈ ಕುರಿತು ಯುವತಿಯ ಪೋಷಕರಿಗೆ ಮಾಹಿತಿ ತಿಳಿಯುತ್ತಿದ್ದಂತೆ, ತಕ್ಷಣ ಕಚೇರಿಗೆ ಎಂಟ್ರಿಕೊಟ್ಟು ಮದುವೆಗೆ ಬ್ರೇಕ್ ಹಾಕಿದ್ದಲ್ಲದೇ, ತಮ್ಮ ಪುತ್ರಿಯ ದೇಹದಿಂದ ರಕ್ತ ಸೋರುವಂತೆ ಥಳಿಸಿ ರಾಕ್ಷಸರಂತೆ ವರ್ತಿಸಿದ್ದಾರೆ.
ಯುವತಿಯು ತನ್ನ ಪ್ರಿಯಕರನತ್ತ ಕೈಬೀಸಿ ಕಾಪಾಡು ಎಂದು ಬೇಡಿಕೊಳ್ಳುವಾಗ ಪೋಷಕರು ಆಕೆಯನ್ನು ದರದರನೇ ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ.
ಸಬ್ ರಿಜಿಸ್ಟರ್ ಕಚೇರಿಬಳಿ ದೊಡ್ಡ ಹೈಡ್ರಾಮವೇ ನಡೆದಿದ್ದರೂ ಜನ, ಅಧಿಕಾರಿಗಳು ಮೂಕಪ್ರೇಕ್ಷರಂತೆ ನೋಡುತ್ತಿರುವುದು ಕಂಡುಬಂತು. ಇನ್ನು ಘಟನೆ ಕುರಿತು ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿಲ್ಲ.