ಚಿಂಚೋಳಿ: ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಮಹಾತ್ಮ ಗೌತಮ್ ಬುದ್ಧ ಚಾರಿಟೇಬಲ್ ಟ್ರಸ್ಟ್‌ನ ಮಾನವೀಯ ಸೇವಾಭಾವದಿಂದ, ಯಲಕಪಳ್ಳಿ ಗ್ರಾಮದ ಸರ್ವೇ ನಂ.137 ರ 7 ಎಕರೆ 10 ಗುಂಟೆ ಹರಿಜನ ಜಮೀನಿನಲ್ಲಿ ಮಹಾತ್ಮ ಗೌತಮ್ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಶಾಂತಿ, ಜ್ಞಾನ ಮತ್ತು ಮಾನವೀಯತೆಯ ಸಂಕೇತವಾಗಿ ನೆರವೇರಿಸಲಾಗಿದೆ.
ಮೂರ್ತಿಯ ಸುತ್ತಲೂ ಹಚ್ಚಹಸಿರಿನ ವಾತಾವರಣ, ಹಕ್ಕಿಗಳ ಕಲರವ ಮತ್ತು ಪ್ರಕೃತಿಯ ನಿಶಬ್ದತೆಯೊಂದಿಗೆ ಈ ತಾಣ ಈಗ ಧ್ಯಾನ ಮತ್ತು ಆತ್ಮಶಾಂತಿಯ ಮಂದಿರವಾಗಿ ಪರಿವರ್ತನೆಗೊಂಡಿದೆ. ಬೆಳಿಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ ಅನೇಕ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರು ಇಲ್ಲಿ ಬಂದು ಧ್ಯಾನ, ಪ್ರಾರ್ಥನೆ ಮತ್ತು ಮೌನ ಚಿಂತನೆಗಳ ಮೂಲಕ ಮನಸ್ಸಿನ ನೆಮ್ಮದಿಯನ್ನು ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲ ರಾಂಪುರೆ “ಬುದ್ಧರು ನಮಗೆ ಹೊರಗಿನ ಲೋಕದಲ್ಲಲ್ಲ, ನಮ್ಮೊಳಗಿನ ಮನಸ್ಸಿನ ಆಳದಲ್ಲಿ ಶಾಂತಿಯನ್ನು ಹುಡುಕುವ ಮಾರ್ಗವನ್ನು ತೋರಿಸಿದ್ದಾರೆ. ಧ್ಯಾನ ಎನ್ನುವುದು ಆತ್ಮಜ್ಞಾನದ ದಾರಿ; ಅದು ನಮ್ಮ ಚಿಂತನೆಗಳನ್ನು ಶುದ್ಧಗೊಳಿಸುವ ಪವಿತ್ರ ಪ್ರಯಾಣ. ಯಲಕಪಳ್ಳಿಯ ಈ ಸ್ಥಳ ಜನರ ಹೃದಯಗಳಲ್ಲಿ ಶಾಂತಿಯ ಬೆಳಕನ್ನು ಹಚ್ಚಲಿದೆ.”
ಟ್ರಸ್ಟ್ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಈ ಸ್ಥಳವು ಸುತ್ತಮುತ್ತಲಿನ ಜನರ ಮನಸ್ಸು ಸೆಳೆಯುವ ಆಧ್ಯಾತ್ಮಿಕ ತಾಣವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಬೌದ್ಧ ಧ್ಯಾನ ಶಿಬಿರಗಳು ಮತ್ತು ಶಾಂತಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಯಲಿ,
“ಶಾಂತಿ, ಜ್ಞಾನ,ಧ್ಯಾನ” ಅಂತರಂಗದ ಬೆಳಕಿನ ದಾರಿ, ಮನದ ನೆಮ್ಮದಿಯ ತಾಣವಾಗಲಿ ಎಂದರು, ಇದೆ ಸಂದರ್ಭದಲ್ಲಿ: ಬುದ್ಧ ವಂದನೆ ಮಾಡಿ ಗೌರವ ಸಲ್ಲಿಸಿದರು.ಉಪಸಕರಾದ ರಾಹುಲ್ ಯಾಕಪೂರ್,ದೇವೆಂದ್ರ ಕಟ್ಟಿಮನಿ, ವಿಶಾಲ ಕಾನ್ಸಿ , ಹಣಮಂತ ಕುಡ್ಡಳಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಹಣಮಂತ ಕುಡಹಳ್ಳಿ




