ಮೊಳಕಾಲ್ಮುರು: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸ್ವಾಗತ ಸಮಾರಂಭ ಮತ್ತು ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಮೊಳಕಾಲ್ಮುರು ಪೊಲೀಸ್ ಠಾಣೆಯಲ್ಲಿ 2 ವರ್ಷ ಸಿಪಿಐ ಆಗಿ ಕಾರ್ಯನಿರ್ವಹಿಸಿ ಇಲ್ಲಿಂದ ವರ್ಗಾವಣೆಗೊಂಡ ವಸಂತ ವಿ. ಅಸೋದೆ ಅವರಿಗೆ ಬಿಳ್ಕೊಡುಗೆ ಮತ್ತು ಪೊಲೀಸ್ ಠಾಣೆಗೆ ನೂತನ ಸಿಪಿಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡ ಆರ್ ನಾಗರಾಜ್ ಹಾಗೂ ಡಿವೈ ಎಸ್ಪಿ ಆಗಿ ನೂತನವಾಗಿ ನಿಯೋಜನೆಗೊಂಡಿರುವ ಸತ್ಯನಾರಾಯಣ ರಾವ್ ಎಂಜಿ ಅವರಿಗೆ ಪೊಲೀಸ್ ಇಲಾಖೆಯಿಂದ ಪಿಎಂಪಿಎಂ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಮಾತನಾಡಿ,ಸಿಪಿಐ ವಸಂತ ಅಸೋದೆ ಅವರ ಜತೆಯಲ್ಲಿ ನಾನು ಮಾಡಿರುವುದು ನನ್ನ ವೃತ್ತಿ ಜೀವನದಲ್ಲಿ ಸ್ಮರಣೀಯವಾದದ್ದು.
ಕಾನೂನು ಪರಿಪಾಲನೆ, ಕಾನೂನು ಸುವವ್ಯಸ್ಥೆ ಕಾಪಾಡುವಲ್ಲಿ ಅವರು ವಹಿಸಿದ ಕಾಳಜಿ ಅನನ್ಯವಾದುದು.
ಪೊಲೀಸ್ ಸಿಬ್ಬಂದಿಗಳಿಗೆ ಕರ್ತವ್ಯದಲ್ಲಿದ್ದಾಗ ಯಾವ ರೀತಿ ಶಿಸ್ತಿನಿಂದ ವರ್ತಿಸಬೇಕು ಹಾಗೂ ಸಾರ್ವಜನಿಕರೊಂದಿಗೆ ಹೇಗೆ ಇರಬೇಕು ಎನ್ನುವುದನ್ನು ತಿಳಿಸುತ್ತಿದ್ದರು.ಎಂತಹದ್ದೇ ಸಂದರ್ಭ ಬಂದರೂ ಕೂಡ ಅವಸರದಿಂದ ಯಾವುದನ್ನು ನಿರ್ಧರಿಸದೆ ಯಾವುದೇ ಒತ್ತಡಗಳಿಗೆ ಮಣಿಯದೆ ತುಂಬಾ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳುತ್ತಿದ್ದರು, ಅವರ ತಾಳ್ಮೆ ಮತ್ತು ನೇರ ನುಡಿ ಅವರ ವ್ಯಕ್ತಿತ್ವ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಂಪುರ ಪಿಎಸ್ಐ ಬಾಹುಬಲಿ ಹಾಗೂ ಹಿರಿಯ ಮುಖಂಡರಾದ ಚಂದ್ರಶೇಖರ ಗೌಡ, ಬಿಜಿಕೆರೆ ಗ್ರಾಪಂ ಅಧ್ಯಕ್ಷ ಜಯಣ್ಣ ಸೇರಿದಂತೆ ಹಲವರು ಮಾತನಾಡಿದರು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂಘಟನೆಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನಿಸಿದರು.
ವರದಿ: ಪಿಎಂ ಗಂಗಾಧರ




