ಬೆಳಗಾವಿ:ಸಮಗ್ರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹಿಳೆಯರಿಗೆ ಒತ್ತಡ ರಹಿತ ಜೀವನ ಶೈಲಿ ಮತ್ತು ಮಾನಸಿಕ ಆರೋಗ್ಯ ಬಹುಮುಖ್ಯ ಎಂದು ಶ್ರೀ ಆರ್ಥೋ ವೈದ್ಯಕೀಯ ನಿರ್ದೇಶಕ ಡಾ. ಐ. ದೇವಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜೈನ್ ಇಂಟರನ್ಯಾಶನಲ್ ಮಹಿಳಾ ವಿಂಗ್ ಅಡಿ ಶನಿವಾರ ಆಯೋಜಿಸಲಾಗಿದ್ದ ಮಹಿಳೆಯರ ಮಾನಸಿಕ ಮತ್ತು ದೈಹಿಕ ಸಮಗ್ರ ಆರೋಗ್ಯ ‘ಸುಕೂನ್’ ವಿಚಾರ ವಿಮರ್ಶಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಒತ್ತಡ ರಹಿತ ಒಳ್ಳೆಯ ಮಾನಸಿಕ ಉಲ್ಲಾಸದಿಂದ ಮಹಿಳೆಯರು ಇರುವುದರಿಂದ ಸಮಗ್ರ ಆರೋಗ್ಯ ಕಂಡುಕೊಳ್ಳಬಹುದಾಗಿದೆ.
ಮಾನಸಿಕ ಅನಾರೋಗ್ಯ ಇಂದು ಮಹಿಳೆಯರ ದೈಹಿಕ ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಜೀವನಶೈಲಿ, ಹಾರ್ಮೋನು ವೈಪರಿತ್ಯ, ಅತಿಯಾದ ಮಾನಸಿಕ ಒತ್ತಡ ಇವೆಲ್ಲ ಆಸ್ಟಿಯೋಪೊರೊಸಿಸ್, ಸವೆತಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ಧೃಡಪಡಿಸಿವೆ. ಮೊಣಕಾಲು ನೋವು, ಬೆನ್ನುನೋವು, ಮರೆವು, ಎಲುಬು ಸವೆತ ಇತ್ತೀಚೆಗೆ ಮಹಿಳೆಯರಲ್ಲಿ ಕಂಡುಬರುವ ಇಂತಹ ಆರೋಗ್ಯ ಸಮಸ್ಯೆಗಳಿಗೆ ಮಾನಸಿಕ ಅನಾರೋಗ್ಯವೇ ಕಾರಣ ಎಂದರು.
ಮಹಿಳೆಗೆ ಆಕೆಯ ಮಕ್ಕಳು, ಪತಿ, ಅತ್ತೆ, ಮಾವ, ಸಹೋದರರು ಹೀಗೆ ತುಂಬು ಕುಟುಂಬದ ಸದಸ್ಯರು ಹಾಗೂ ಸಮಾಜ ಗೌರವಾದರ ನೀಡುವುದರಿಂದ ಆಕೆಯ ಆರೋಗ್ಯ ಮತ್ತು ಇಡೀ ಸಮಾಜಕ್ಕೇ ಒಳಿತಾಗುತ್ತದೆ. ಭಾರತ ದೇಶದಲ್ಲಿ ಅತಿ ಆದರಣೀಯಳಾದ ಮಹಿಳೆಯ ಆರೋಗ್ಯಕ್ಕೆ ಅವಳ ಮಾನಸಿಕ ಆರೋಗ್ಯ ಸುಧಾರಣೆ ಮಾಡುವಲ್ಲಿ ಸಮಾಜದ ಒಟ್ಟು ಪಾತ್ರವಿದೆ ಎಂದರು.
ಮಾನಸಿಕ ಆರೋಗ್ಯ ಸಮಾಲೋಚಕ ಆಕಾಶ್ ಸೈಡಲ್ ಅವರು ಆರೋಗ್ಯ ಆದ್ಯತೆಗಳ ಕುರಿತು ಮಾತನಾಡಿದರು.
ಸುಮಾರು 50ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು, ಶೈಕ್ಷಣಿಕ ತಜ್ಞರು ಭಾಗವಹಿಸಿದ್ದರು. ಅಧ್ಯಕ್ಷೆ ಮಾಯಾ ಜೈನ್, ಕಾರ್ಯದರ್ಶಿ ಮಮತಾ ಜೈನ್, ಸಂಯೋಜಕಿ ಅಂಜನಾ ಬಾಗೇವಾಡಿ ಇತರರು ಉಪಸ್ಥಿತರಿದ್ದರು.